

ಹುಬ್ಬಳ್ಳಿ: ಹಿಂದು ಧರ್ಮದಲ್ಲಿ ಜಾತಿ ಎಂಬುದು ಒಂದು ಮಹತ್ವದ ಅಂಶ ಅಲ್ಲವೇ ಅಲ್ಲ. ಹಿಂದುಗಳಿಗೆ ಇದು ಪ್ರಾಥಮಿಕ ಅಗತ್ಯವೂ ಆಗಿಲ್ಲ. ಆದರೆ, ಕೆಲವರು ಹಿಂದುತ್ವದೊಂದಿಗೆ ಇದನ್ನು ಜೋಡಿಸಿ ತಮಗೆ ಬೇಕಾದ ಹಾಗೆ ಹಿಂದು ಧರ್ಮವನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಮೋ ಬ್ರಿಗೇಡ್ ವತಿಯಿಂದ ಇಲ್ಲಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಏರ್ಪಡಿಸಲಾಗಿರುವ "ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ!' ಮೂರು ದಿನಗಳ ಸರಣಿ ಉಪನ್ಯಾಸ ಕಾರ್ಯಕ್ರಮದ ಎರಡನೇ ದಿನ ಶನಿವಾರ ಅವರು ಉಪನ್ಯಾಸ ನೀಡಿದರು.
ಹಿಂದುತ್ವ ಹಾಗೂ ಹಿಂದು ಧರ್ಮದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದ ಕೆಲವರು ಜಾತಿ ವ್ಯವಸ್ಥೆ ನಾಶ ಮಾಡಬೇಕಾದರೆ ಹಿಂದು ಧರ್ಮವನ್ನೇ ಕಿತ್ತು ಹಾಕಬೇಕು ಎಂದು ಹೊರಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ದೇಶದ ಅತ್ಯುನ್ನತ ಜ್ಞಾನಾರ್ಜನೆ ಕೇಂದ್ರಗಳಾದ ಐಐಟಿ, ಐಐಎಂನಲ್ಲಿಯೂ ಜಾತಿಯತೆ ಭೂತ ಕಾಡುತ್ತಿದೆ. ಯಾರೋ ಕೆಲವರು ಉನ್ನತ ಶಿಕ್ಷಣ ಪೂರೈಸಲು ಸಾಧ್ಯವಾಗದೇ ಅಲ್ಲಿಂದ ವಾಪಸ್ ಬಂದರೆ ಅಲ್ಲಿನ ವ್ಯವಸ್ಥೆಯೇ ಸರಿ ಇಲ್ಲ ಎಂದು ಅವುಗಳನ್ನು ಮುಚ್ಚಿ ಬಿಡುವ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಭಾರತ ಗ್ರೇಟ್ ಆಗುವುದು ಬೇಡವಾಗಿದೆ ಎಂದು ವಿಶ್ಲೇಷಿಸಿದರು.
ಭಾರತದಲ್ಲಿ ಇರುವುದು ವರ್ಣ ವ್ಯವಸ್ಥೆ. ಜಾತಿ ವ್ಯವಸ್ಥೆಯಲ್ಲ. ಆದರೆ, ಅನೇಕ ಜನರು ವಸ್ತುನಿಷ್ಠ ಚರ್ಚೆಗೆ ಮುಂದೆ ಬರುವುದಿಲ್ಲ. ಭಾರತದಲ್ಲಿ ಆರ್ಯರ ಆಕ್ರಮಣ ನಡೆದಿಲ್ಲ. ಇಷ್ಟಾದರೂ ಆರ್ಯರು ಆಕ್ರಮಣ ಮಾಡಿ ಜಾತೀಯತೆ ಮಾಡಿದರು ಎಂಬಂತೆ ಬಿಂಬಿಸಲಾಗುತ್ತಿದೆ. ಇದು ಸುಳ್ಳು ಎಂದು ಹೇಳಿದರು.