‘ನಮ್ಮ ರಸ್ತೆ’ ಕಾರ್ಯಗಾರಕ್ಕೆ ಯಶಸ್ವಿ ತೆರೆ

namma raste
Published on

ಬೆಂಗಳೂರು: ನಗರದಲ್ಲಿ ರಸ್ತೆಗಳ ಸ್ಥಿತಿಗತಿ ಸುಧಾರಣೆ ಕುರಿತು ಬಿಬಿಎಂಪಿ ಆಯೋಜಿಸಿದ್ದ ಮೂರು ದಿನಗಳ ‘ನಮ್ಮ ರಸ್ತೆ-2025’ ಕಾರ್ಯಾಗಾರ ಶನಿವಾರ ಯಶಸ್ವಿ ತೆರೆ ಕಂಡಿತು.

ಪಾಲಿಕೆಯ ಕೇಂದ್ರ ಕಚೇರಿ ಆವರಣದ ಡಾ. ರಾಜ್​​​ಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಪ್ರದರ್ಶನ ಒಳಗೊಂದಿದ್ದ ಕಾರ್ಯಾಗಾರದಲ್ಲಿ 5,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಡಬ್ಲ್ಯುಆರ್‌ಐ ಇಂಡಿಯಾ ಜ್ಞಾನ ಪಾಲುದಾರರಾಗಿದ್ದ ಕಾರ್ಯಕ್ರಮದಲ್ಲಿ ಸುಸ್ಥಿರ ನಗರ ಸಾರಿಗೆ ಪರಿಹಾರಗಳ ಕುರಿತು ಚರ್ಚಿಸಲು ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಪಾಲುದಾರರು ತಮ್ಮ ಸಲಹೆ ಸೂಚನೆಯನ್ನು ನೀಡಿದರು.

ಮೊದಲ ದಿನ ಕಾರ್ಯಾಗಾರ ಉದ್ಘಾಟಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಗರದ ರಸ್ತೆಗಳನ್ನು ಗುಣಮಟ್ಟ ಹಾಗೂ ದೀರ್ಘ ಬಾಳಿಕೆ ಹಿನ್ನೆಲೆ ‘ನಮ್ಮ ರಸ್ತೆ ಕೈಪಿಡಿ’ ಬಿಡುಗಡೆ ಮಾಡಿದ್ದರು. ಈ ಕೈಪಿಡಿಯಲ್ಲಿರುವ ಅಂಶಗಳನ್ನು ಪಾಲಿಕೆಯು ಅನುಷ್ಠಾನಕ್ಕೆ ತರಬೇಕು ಎಂದು ಸೂಚಿಸಿದ್ದರು. ಎರಡನೇ ದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಾರ್ವಜನಿಕ ಸಾರಿಗೆಯ ಮಹತ್ವವನ್ನು ತಿಳಿಸಿಕೊಟ್ಟರು. ಜತೆಗೆ ನಗರದ ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಪಾಲಿಕೆಯೊಂದಿಗೆ ಇತರ ಪಾಲುದಾರ ಸಂಸ್ಥೆಗಳು ಜತೆಗೂಡಬೇಕು ಎಂದು ಪ್ರತಿಪಾದಿಸಿದರು.

ಬೆಂಗಳೂರಿನ ಸಂಚಾರ ನಿರ್ವಹಣೆ, ಸುಸ್ಥಿರ ಸಾರಿಗೆ, ಸಮೂಹ ಸಾರಿಗೆಗೆ ಉದ್ಯೋಗಗಳನ್ನು ಹತ್ತಿರ ತರುವುದರ ಕುರಿತು ನಡೆದ ಸಮಾವೇಶದಲ್ಲಿ ಚರ್ಚಿಸಲಾಯಿತು. ಮೂರೂ ದಿನವು ಒಟ್ಟು 70ಕ್ಕೂ ಹೆಚ್ಚು ಭಾಷಣಕಾರರು, 68 ಸರ್ಕಾರಿ ಮತ್ತು ಪಾಲುದಾರ ಸಂಸ್ಥೆಗಳು, 16ಕ್ಕೂ ಹೆಚ್ಚು ಶಾಲಾ- ಕಾಲೇಜುಗಳು, ಹಲವು ಕಾರ್ಪೊರೇಟ್ ಸಂಸ್ಥೆಗಳು ಭಾಗವಹಿಸಿದ್ದವು.

ನಮ್ಮ ಬಸ್ ಬಗ್ಗೆ ರಸಪ್ರಶ್ನೆ:

ಶನಿವಾರ ಫ್ರೆಂಡ್ಸ್ ಆಫ್​ ಬಿಎಂಟಿಸಿ ಆಯೋಜಿಸಿದ್ದ ‘ನಮ್ಮ ಬಸ್’ ಕುರಿತು ರಸಪ್ರಶ್ನೆ ನಡೆಯಿತು. ಇದರಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಬಿಎಂಟಿಸಿ ಸಿಬ್ಬಂದಿ ಕೂಡ ಪಾಲ್ಗೊಂಡಿದ್ದರು. ನಂತರ ನಡೆದ ಸುರಕ್ಷಿತ ಪಾದಚಾರಿ ಮೂಲಸೌಕರ್ಯದ ಬಗ್ಗೆ ವಿವಿಧ ಸಲಹೆಗಳು ಕೇಳಿಬಂದವು. ಇವುಗಳನ್ನು ಜಾರಿಗೊಳಿಸಲು ಪಾಲಿಕೆಗೆ ಮನವಿ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net