ಇನ್ನು ನಮ್ಮ ಮೆಟ್ರೋದಲ್ಲೂ ಸಿಗುತ್ತೆ ಇ-ಟಿಕೆಟ್​!

namma metro
ನಮ್ಮ ಮೆಟ್ರೋ
Published on

ಬೆಂಗಳೂರು: ಇದೀಗ ನಮ್ಮ ಮೆಟ್ರೋ ಮೊಬೈಲ್ ಆ್ಯಪ್​ನಲ್ಲಿ ಪ್ರಯಾಣಿಕರು ಟಿಕೆಟ್​ ಬುಕ್​ ಮಾಡಬಹುದು.

ಈ ಸೇವೆ ನಾಳೆಯಿಂದಲೇ (ಡಿ.8) ಜಾರಿಗೆ ಬರಲಿದೆ. ಇನ್ನು ಮೊಬೈಲಿನಲ್ಲೇ ಮುಂದಿನ ಮೆಟ್ರೋ ಪ್ರಯಾಣದ ಟಿಕೆಟ್​ಅನ್ನು ಕಾಯ್ದಿರಿಸಬಹುದು. ನೀವು ಪೇಟಿಎಂ ಹಾಗೂ ಯಾತ್ರಾ ಆ್ಯಪ್​ನಲ್ಲಿಯೂ ಟಿಕೆಟ್​ ಕಾಯ್ದಿರಿಸಬಹುದು. ಈ-ಟಿಕೆಟ್​, ಕ್ಯೂ-ಆರ್​ ಕೋಡ್​ ರೂಪದಲ್ಲಿ ಇರಲಿದ್ದು, ಗೇಟಿನ ಬಳಿ ಸ್ಕ್ಯಾನ್​ ಮಾಡಿದರೆ ಬಾಗಿಲು ತೆರೆದುಕೊಳ್ಳಲಿದೆ. ಇದರಿಂದ ಟಿಕೆಟ್​ ಕೌಂಟರ್​ ಎದುರು ಲೈನ್​ ಹಿಡಿದು ನಿಲ್ಲುವ ಪರಿಸ್ಥಿತಿ ತಪ್ಪಲಿದೆ.

ಪೇಟಿಎಂ (Paytm) ಅಥವಾ ಯಾತ್ರಾ (Yatra) ಆ್ಯಪ್​ ಮೂಲಕ ಮೊಬೈಲ್ QR ಟಿಕೆಟ್‌ಗಳನ್ನು ಖರೀದಿಸಲು ಪ್ರಯಾಣಿಕರು ಆಂಡ್ರಾಯ್ಡ್ (android) ಅಥವಾ iOS ಹೊಂದಿರುವ ಮೊಬೈಲ್​ನಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಪ್ರಯಾಣ ಮಾಡುವ ದಿನದಂದು ಪ್ರವೇಶ ಮತ್ತು ಗಮ್ಯಸ್ಥಾನದ ನಿಲ್ದಾಣವನ್ನು ಸ್ಪಷ್ಟಪಡಿಸಿ ಪ್ರಯಾಣಿಕರು ಟಿಕೆಟ್​ ಪಡೆಯಬಹುದು.

ಈ-ಟಿಕೆಟ್​ಗಳು ಆಯಾ ದಿನದ ಕೊನೆವರೆಗೆ ಮಾತ್ರ ಮಾನ್ಯತೆಯನ್ನು ಹೊಂದಿರಲಿವೆ. ಅಂದರೆ ಈ ದಿನ ಬುಕ್​ ಮಾಡಿರುವ ಟಿಕೆಟ್​ಗಳನ್ನು ಈ ದಿನವೇ ಬಳಸ ಬೇಕಾಗುತ್ತೆ. ಆದರೆ ಈಗಾಗಲೇ ಟಿಕೆಟ್​ ಬುಕ್​ ಮಾಡಿದ್ದು, ಪ್ರಯಾಣಿಸುವ ಅಗತ್ಯ ಇಲ್ಲಾ ಎಂದಾದರೆ, ಈ ಟಿಕೆಟ್​ಅನ್ನು ರದ್ದುಪಡಿಸಿ ಅದರ ಹಣವನ್ನು ರೀಫಂಡ್​ ಮಾಡಿಸಿಕೊಳ್ಳಬಹುದು.

ಇನ್ನು ಇ-ಟಿಕೆಟ್​ಗಳನ್ನು ಖರೀದಿಸಿ ಪ್ರಯಾಣ ಮಾಡುವವರಿಗೆ ವಿಶೇಷ ರಿಯಾಯಿತಿಯನ್ನೂ ನೀಡಲಾಗುತ್ತಿದೆ. ಇ-ಟಿಕೆಟ್‌ಗಳನ್ನು ಕೌಂಟರ್​ನ ದರಕ್ಕಿಂತ ಶೇಕಡ 5ರಷ್ಟು ರಿಯಾಯಿತಿಯಲ್ಲಿ ಕೊಡಲಾಗುತ್ತಿದೆ. ಇಂತಹ ಉತ್ತಮ ಆಫರ್​ಅನ್ನು ಜನರು ಬಳಸಿಕೊಳ್ಳಬೇಕು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಜನರಲ್ಲಿ ವಿನಂತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net