ಬೈಯಪ್ಪನಹಳ್ಳಿ-ಕೆ.ಆರ್​.ಪುರ ಮಾರ್ಗದಲ್ಲಿ ಅಂತಿಮ ಪರಿಶೀಲನೆ ಯಶಸ್ವಿ

Metro
Published on

ಬೆಂಗಳೂರು: ಬೈಯಪ್ಪನಹಳ್ಳಿ- ಕೆ.ಆರ್​.ಪುರ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಗುರುವಾರ ನಡೆಸಿದ ಅಂತಿಮ ಹಂತದ ಪರಿಶೀಲನೆ ಯಶಸ್ವಿಯಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ತಿಳಿಸಿದೆ.

ರೈಲಿನ ವೇಗ, ವಿದ್ಯುತ್​ ವ್ಯವಸ್ಥೆ, ರೈಲುಗಳ ಸಂಚಾರ ಸಮಯ, ಸಿಗ್ನಲಿಂಗ್​, ನಿಲ್ದಾಣಗಳಲ್ಲಿ ಮೂಲಸೌಕರ್ಯ ಮುಂತಾದ ಕ್ರಮಗಳ ಬಗ್ಗೆ ಕಮಿಷನರ್​ ಆಫ್ ಮೆಟ್ರೋ ರೈಲ್​ ಸೇಫ್ಟಿ (ಸಿಎಂಆರ್​ಎಸ್​) ಅಧಿಕಾರಿಗಳ ತಂಡ ಪರಿಶೀಲಿಸಿ ಅಂತಿಮ ವರದಿ ನೀಡಿದೆ.

ಪ್ರಸ್ತುತ ನೇರಳೆ ಮಾರ್ಗದಲ್ಲಿ ಕೆಂಗೇರಿ-ಬೈಯಪ್ಪನಹಳ್ಳಿ, ಕೆ.ಆರ್​.ಪುರ-ವೈಟ್​ಫೀಲ್ಡ್​ ನಡುವೆ ಮೆಟ್ರೋ ರೈಲು ಸಂಚರಿಸುತ್ತಿದೆ. ಆದರೆ, ಬೈಯಪ್ಪನಹಳ್ಳಿ-ಕೆ.ಆರ್​.ಪುರ ನಡುವಿನ 2.1 ಕಿ.ಮೀ. ಉದ್ದದ ಮಾರ್ಗ ಪೂರ್ಣವಾಗಿ ಸಿದ್ಧಗೊಳ್ಳದ ಕಾರಣ ಈವರೆಗೆ ವಾಣಿಜ್ಯ ಸೇವೆಗೆ ಲಭ್ಯವಾಗಿರಲಿಲ್ಲ. ಇದೀಗ ಸಿಎಂಆರ್​ಎಸ್​ ತಂಡದ ಪರಿಶೀಲನೆ ಯಶಸ್ವಿಯಾಗಿದೆ. ಸದ್ಯದಲ್ಲೇ ಮತ್ತೊಂದು ವಿಸ್ತರಿತ ಮಾರ್ಗವಾದ ಕೆಂಗೇರಿ-ಚಲ್ಲಘಟ್ಟ ನಡುವೆ ಸಿಎಂಆರ್​ಎಸ್​ ತಂಡ ಪರಿಶೀಲನೆ ನಡೆಸಲಿದೆ. ಹೀಗಾಗಿ ಅಕ್ಟೋಬರ್​ ಅಂತ್ಯದ ಒಳಗಾಗಿ ಬೈಯಪ್ಪನಹಳ್ಳಿ&ಕೆ.ಆರ್​.ಪುರ ಹಾಗೂ ಕೆಂಗೇರಿ& ಚಲ್ಲಘಟ್ಟ ವಿಸ್ತರಿತ ಮಾರ್ಗದಲ್ಲಿ ನಮ್ಮ ಮೆಟ್ರೋ ವಾಣಿಜ್ಯ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

ಉದ್ಘಾಟನೆ ತಡ ಯಾಕಾಯ್ತು?

ಕಳೆದ ಮಾ.25ರಂದು ಪ್ರಧಾನಿ ನರೇಂದ್ರ ಮೋದಿ ಕೆ.ಆರ್​.ಪುರ-ವೈಟ್​ಫೀಲ್ಡ್​ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. ಆದರೆ, ಬೈಯಪ್ಪನಹಳ್ಳಿಯಿಂದ ಜ್ಯೋತಿಪುರ ಮಾರ್ಗವಾಗಿ ಕೆ.ಆರ್​.ಪುರ ಮಾರ್ಗದಲ್ಲಿ ಕೆಲ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಈ ಮಾರ್ಗವನ್ನು ಉದ್ಘಾಟಿಸಿರಲಿಲ್ಲ. ಜತೆಗೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭವೂ ಕಾಮಗಾರಿ ವೇಗ ಪಡೆದುಕೊಳ್ಳಲು ಹಿನ್ನಡೆಯಾಗಿತ್ತು. ಒಟ್ಟಾರೆಯಾಗಿ ಕಳೆದ ಆಗಸ್ಟ್​ನಲ್ಲಿ ವಿಸ್ತರಿತ ಮಾರ್ಗ ವಾಣಿಜ್ಯ ಸೇವೆಗೆ ಲಭ್ಯವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಅಲ್ಲದೆ ಅಂತಿಮ ಹಂತದ ಸುರಕ್ಷತಾ ಪ್ರಕ್ರಿಯೆಯೂ ಈ ಹಿಂದೆ ರದ್ದಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net