ಮೆಟ್ರೋ ನಿಲ್ದಾಣದಲ್ಲಿ ಬ್ಯಾಟರಿ ಚಾಲಿತ ವಾಹನ; ಜನದಟ್ಟಣೆ ಸಂದರ್ಭದಲ್ಲಿ ಉಪಯುಕ್ತ

Namma Metro
Published on

ರಾಮ ಕಿಶನ್​ ಕೆ.ವಿ.
ಬೆಂಗಳೂರು: ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ ವಿನೂತನ ಸೌಲಭ್ಯ ಕಲ್ಪಿಸುವಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​), ಪ್ರಸ್ತುತ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ (ಮೆಜೆಸ್ಟಿಕ್​) ಹಿರಿಯ ನಾಗರಿಕರು ಹಾಗೂ ಅಂಗವಿಕಲ ಪ್ರಯಾಣಿಕರಿಗೆ ನೆರವಾಗಲು ಬ್ಯಾಟರಿಚಾಲಿತ ವಾಹನ ವ್ಯವಸ್ಥೆ ಕಲ್ಪಿಸಿದೆ.

ಮೆಜೆಸ್ಟಿಕ್​ ನಿಲ್ದಾಣದ ಟಿಕೆಟ್​ ಕೌಂಟರ್​ನಿಂದ ನಿರ್ಗಮನ ದ್ವಾರಕ್ಕೆ ಕನಿಷ್ಠ 200 ಮೀಟರ್​ ಅಂತರವಿದೆ. ಹೀಗಾಗಿ ಅಲ್ಲಿಯವರೆಗೆ ನಡೆಯಲು ಕಷ್ಟಪಡುವವರಿಗಾಗಿ ವಾಹನ ಸೌಕರ್ಯ ಮಾಡಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ವಾಹನ ಬೇಕೆಂದು ಸಿಬ್ಬಂದಿಗೆ ತಿಳಿಸಿದರೆ ತಕ್ಷಣ ವ್ಯವಸ್ಥೆ ಮಾಡಿಕೊಡುತ್ತಾರೆ. ಈ ವಾಹನವು ಮಾಲಿನ್ಯರಹಿತವಾಗಿದೆ. ಇದಕ್ಕೆ ಯಾವುದೇ ಇಂಧನ ಬೇಕಿಲ್ಲ.

ದಟ್ಟಣೆ ಸಂದರ್ಭದಲ್ಲಿ ಸಹಕಾರಿ

ಪ್ರಸ್ತುತ ನಮ್ಮ ಮೆಟ್ರೋ ನೇರಳೆ ಹಾಗೂ ಹಸಿರು ಮಾರ್ಗ ಸೇರಿ ಒಟ್ಟು 73.81 ಕಿ.ಮೀ. ಜಾಲ ಹೊಂದಿದೆ. ಪ್ರಯಾಣಿಕರಿಗೆ ಪ್ರಸ್ತುತ ಮಾರ್ಗ ಬದಲಾವಣೆಗೆ ಅವಕಾಶ ಇರುವುದು ಮೆಜೆಸ್ಟಿಕ್​ ನಿಲ್ದಾಣದಲ್ಲಿ. ಇದು ಇಂಟರ್​ಚೇಂಜ್​ ನಿಲ್ದಾಣವಾದ್ದರಿಂದ ಸದಾ ಪ್ರಯಾಣಿಕರ ದಟ್ಟಣೆ ಏರ್ಪಡುತ್ತಿರುತ್ತದೆ. ಈ ನಿಲ್ದಾಣದ ಮೂಲಕ ನಿತ್ಯ 40 ಸಾವಿರಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದು, ಹಿರಿಯ ನಾಗರಿಕರು, ಅಂಗವಿಕಲರಿಗೆ ಸರಾಗವಾಗಿ ಓಡಾಡಲು ಸಾಧ್ಯವಾಗುವುದಿಲ್ಲ. ನೂಕುನುಗ್ಗಲು ಉಂಟಾದ ಸಂದರ್ಭದಲ್ಲಿ ಒದ್ದಾಡಿಕೊಂಡು ಮುಂದೆ ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಈ ವೇಳೆ ಬ್ಯಾಟರಿಚಾಲಿತ ವಾಹನ ಹೆಚ್ಚು ಸಹಕಾರಿಯಾಗುತ್ತಿದೆ.

ಇತರೆ ನಿಲ್ದಾಣಗಳಿಗೂ ವಿಸ್ತರಣೆಯಾಗಲಿ

ನಿಲ್ದಾಣದ ಆಗಮನ ದ್ವಾರದಿಂದ ಟಿಕೆಟ್​ ಕೌಂಟರ್​ನ ಅಂತರ ಗಮನಿಸಿದಾಗ ಕಬ್ಬನ್​ ಪಾರ್ಕ್​, ಡಾ.ಬಿ.ಆರ್​. ಅಂಬೇಡ್ಕರ್​ (ವಿಧಾನಸೌಧ), ಕೆ.ಆರ್​. ಮಾರುಕಟ್ಟೆ, ಬನಶಂಕರಿ ನಿಲ್ದಾಣಗಳಲ್ಲೂ ವಿಸ್ತೀರ್ಣ ಹೆಚ್ಚಿದೆ. ಅಶಕ್ತರು ಕನಿಷ್ಠ 100 ಮೀಟರ್​ ದೂರವನ್ನು ಕ್ರಮಿಸಬೇಕಾಗಿದೆ. ಲಗೇಜ್​ ಇದ್ದರೆ ಅವರು ಇನ್ನಷ್ಟು ಹೆಣಗಾಡಬೇಕಿದೆ. ಹೀಗಾಗಿ ಈ ನಿಲ್ದಾಣಗಳಲ್ಲೂ ಬ್ಯಾಟರಿಚಾಲಿತ ವಾಹನವನ್ನು ಅನುಷ್ಠಾನಕ್ಕೆ ತಂದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹಿರಿಯ ನಾಗರಿಕರು ಬಿಎಂಆರ್​ಸಿಎಲ್​ಗೆ ಮನವಿ ಮಾಡಿದ್ದಾರೆ.

ಜಯದೇವ ನಿಲ್ದಾಣದಲ್ಲೂ ಬೇಕು

ನಗರದ ಅತಿ ದೊಡ್ಡ ಮೆಟ್ರೋ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಡಲಿರುವ ಜಯದೇವ ಮೆಟ್ರೋ ನಿಲ್ದಾಣದ ಕಾಮಗಾರಿ ಶೇ.80 ಮುಕ್ತಾಯವಾಗಿದೆ. ಮುಂದಿನ ವರ್ಷದಿಂದ ಕಾರ್ಯಾರಂಭ ಮಾಡುವ ನಿರೀೆ ಇದೆ. ಇದು ಹಳದಿ ಮತ್ತು ಗುಲಾಬಿ ಮೆಟ್ರೋ ರೈಲು ಮಾರ್ಗದ ಇಂಟರ್​ಚೇಂಜ್​ ನಿಲ್ದಾಣವಾಗಿದ್ದು, ಮೆಜೆಸ್ಟಿಕ್​ ನಿಲ್ದಾಣದ ಮಾದರಿಯಲ್ಲೇ ಕಾರ್ಯನಿರ್ವಹಿಸಲಿದೆ. ದಿನದಿಂದ ದಿನಕ್ಕೆ ನಗರದ ಜನರು ಮೆಟ್ರೋ ಪ್ರಯಾಣದತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಹೀಗಿರುವಾಗ ಆರಂಭದ ದಿನದಿಂದಲೂ ಈ ನಿಲ್ದಾಣದಲ್ಲಿ ಬ್ಯಾಟರಿಚಾಲಿತ ವಾಹನ ಸೇವೆ ಸೇರಿ ಹಿರಿಯ ನಾಗರಿಕರು, ಅಂಗವಿಕಲರಿಗೆ ಸಹಕಾರಿಯಾಗುವ ಸೇವೆಗಳು ಆರಂಭವಾಗಲಿ ಎಂದು ಜನರು ಬಿಎಂಆರ್​ಸಿಎಲ್​ಗೆ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net