

ಅವಿನಾಶ್ ಜೈನಹಳ್ಳಿ ಮೈಸೂರು
ಜನನಿಬಿಡ ಪ್ರದೇಶಗಳಾದ ನಗರ, ಗ್ರಾಮಾಂತರ ಬಸ್ ನಿಲ್ದಾಣ, ಚಾಮುಂಡಿಬೆಟ್ಟ ಹಾಗೂ ಹೊಸ ಬಡಾವಣೆಗಳು ಸೇರಿದಂತೆ ನಗರದಲ್ಲಿ ಒಂದು ವಾರದಲ್ಲಿ ಒಟ್ಟು 12 ಕಡೆಗಳಲ್ಲಿ ಹೊಸದಾಗಿ ‘ನಮ್ಮ ಕ್ಲಿನಿಕ್’ ಆರಂಭಿಸಲಾಗುತ್ತಿದೆ. ಇದರಿಂದ ಹೆಚ್ಚುವರಿಯಾಗಿ 1.60 ಲಕ್ಷ ಜನರಿಗೆ ಆರೋಗ್ಯ ಸೇವೆ ಲಭ್ಯವಾಗಲಿದೆ.
ಈಗಾಗಲೇ ನಗರ ವ್ಯಾಪ್ತಿಯ 65 ವಾರ್ಡ್‌ಗಳಲ್ಲಿ 21 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೇ 2 ಸಮುದಾಯ ಆರೋಗ್ಯ ಕೇಂದ್ರ, 2 ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಕೆ.ಆರ್.ಆಸ್ಪತ್ರೆ, ಚೆಲುವಾಂಬ, ಸೂಪರ್ ಸ್ಪೆಷಾಲಿಟಿ, ಟ್ರಾಮಾ ಕೇರ್, ಜಯದೇವ ಆಸ್ಪತ್ರೆಗಳು ನಗರ ವ್ಯಾಪ್ತಿಯಲ್ಲಿನ ಜನತೆಗೆ ಆರೋಗ್ಯ ಸೇವೆ ನೀಡುತ್ತಿವೆ.
ಆದರೆ, ಮೈಸೂರು ನಗರ ಕ್ರಮೇಣ ವೇಗವಾಗಿ ಬೆಳೆಯುತ್ತಿದೆ. ರಿಂಗ್ ರಸ್ತೆಯಿಂದ 15 ಕಿ.ಮೀ. ದೂರದವರೆಗೆ ನಗರ ವಿಸ್ತರಣೆಯಾಗಿದೆ. ಈ ಭಾಗದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಬಡಾವಣೆಗಳಿಗೆ ಸರ್ಕಾರಿ ಆರೋಗ್ಯ ಸೇವೆ ಲಭ್ಯವಿಲ್ಲದಂತಾಗಿದೆ. ಮಾತ್ರವಲ್ಲದೆ ಇವರೆಲ್ಲರೂ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಹತ್ತಾರು ಕಿ.ಮೀ. ದೂರದಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಬಂದು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಿಂಗ್ ರಸ್ತೆಯಿಂದ ಹೊರಭಾಗದ 10 ಬಡಾವಣೆ ಸೇರಿ ಒಟ್ಟು 12 ಕಡೆಗಳಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಜಾಗ, ಕಟ್ಟಡ ಹುಡುಕಾಟ: 15 ರಿಂದ 20 ಸಾವಿರ ಜನರಿಗೆ ಒಂದರಂತೆ ಆಯ್ಕೆ ಮಾಡಿರುವ 9 ಸ್ಥಳಗಳಲ್ಲಿ ನಮ್ಮ ಕ್ಲಿನಿಕ್‌ಗಳು ಈಗಾಗಲೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಹೆಚ್ಚುವರಿಯಾಗಿ ಆಯ್ಕೆ ಮಾಡಿರುವ 12 ನಮ್ಮ ಕ್ಲಿನಿಕ್‌ಗಳಲ್ಲಿ ನಗರ, ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಕಟ್ಟಡ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಚಾಮುಂಡಿ ಬೆಟ್ಟದಲ್ಲಿಯೂ ಕಟ್ಟಡ ದೊರೆತಿದೆ. ಇನ್ನುಳಿದಂತೆ 9 ಬಡಾವಣೆಗಳಲ್ಲಿ 7ರಲ್ಲಿ ಜಾಗ ಮತ್ತು ಕಟ್ಟಡ ದೊರೆತಿದೆ. ಇನ್ನೆರಡು ಕಡೆ ಜಾಗ ದೊರೆತಿದ್ದು, ಕಟ್ಟಡ ಹುಡುಕಾಟ ನಡೆದಿದೆ. ಒಂದೆರಡು ದಿನದಲ್ಲಿ ಜಾಗ, ಕಟ್ಟಡ ಗುರುತಿಸುವ ಕಾರ್ಯ ಪೂರ್ಣಗೊಳ್ಳಲಿದ್ದು, ವಾರದಲ್ಲಿ ಕ್ಲಿನಿಕ್ ಆರಂಭವಾಗಲಿವೆ.
ಕೆಎಸ್‌ಆರ್‌ಟಿಸಿ ವತಿಯಿಂದಲೇ ನಗರ, ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರ ಅನುಕೂಲಕ್ಕಾಗಿ ಎರಡೂ ನಿಲ್ದಾಣಗಳಲ್ಲಿಯೂ ನಮ್ಮ ಕ್ಲಿನಿಕ್ ಆರಂಭಿಸಬೇಕೆಂದು ಮನವಿ ಮಾಡಲಾಗಿತ್ತು. ಅದರಂತೆ ಶೀಘ್ರದಲ್ಲಿಯೇ ಸೇವೆ ಆರಂಭಿಸಲಾಗುತ್ತಿದೆ. ನಿತ್ಯವೂ 30 ಸಾವಿರ ಜನರು ಭೇಟಿ ನೀಡುವ ಚಾಮುಂಡಿ ಬೆಟ್ಟದಲ್ಲಿಯೂ ಜಾಗ, ಕಟ್ಟಡ ಗುರುತಿಸಲಾಗಿದೆ. ಕೆಲವೇ ದಿನಗಳಲ್ಲಿ ಇಲ್ಲಿ ಆರೋಗ್ಯ ಸೇವೆ ಶುರುವಾಗಲಿದೆ.
ತಾಯಿ ಮತ್ತು ಮಕ್ಕಳ ಆರೈಕೆ, ಹದಿಹರೆಯದವರಿಗೆ ಸಲಹೆ, ಸಾರ್ವಜನಿಕ ಲಸಿಕೆ ನೀಡಿಕೆ, ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಚಿಕಿತ್ಸೆ, ಸಾಂಕ್ರಾಮಿಕ ಮತ್ತು ಸಾಮಾನ್ಯ, ಸಣ್ಣ ಕಾಯಿಲೆಗಳಿಗೆ ಚಿಕಿತ್ಸೆ, ಸ್ತನ, ಗರ್ಭಕೋಶದ ಕ್ಯಾನ್ಸರ್ ತಪಾಸಣೆ, ಕಣ್ಣಿನ ತಪಾಸಣೆ, ಮಾನಸಿಕ ಆರೋಗ್ಯ ಸೇವೆ ಲಭ್ಯ.
ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ, ರಾಜೀವ್‌ನಗರ, ಭಾರತಿ ನಗರ, ಹಳೇಕೆಸರೆ, ಏಕಲವ್ಯನಗರ, ಚಾಮುಂಡಿಬೆಟ್ಟ, ವಿಜಯನಗರ 3, 4ನೇ ಹಂತ, ದಟ್ಟಗಳ್ಳಿ, ವಿಜಯನಗರ 1ನೇ ಹಂತ, ನಗರ ಬಸ್ ನಿಲ್ದಾಣ, ಗ್ರಾಮಾಂತರ ಬಸ್ ನಿಲ್ದಾಣ.
ನಗರ ಬೆಳೆದಂತೆ ಆರೋಗ್ಯ ಸೇವೆ ವಿಸ್ತರಿಸಿಕೊಳ್ಳಬೇಕಿದೆ. ಅದಕ್ಕಾಗಿ ಹೆಚ್ಚುವರಿಯಾಗಿ 12 ನಮ್ಮ ಕ್ಲಿನಿಕ್‌ಗಳನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತಿದೆ. ಈಗಾಗಲೇ ನಗರ ವ್ಯಾಪ್ತಿಯ 65 ವಾರ್ಡ್‌ಗಳಲ್ಲಿ 21 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಡಾ.ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ