

ಬೆಂಗಳೂರು: ಪ್ರಸ್ತಕ ಸಾಲಿನ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿಎಂ-ಎಬಿಎಚ್‌ಐಎಂ) ಯೋಜನೆಯಡಿ 817 ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರ (ನಮ್ಮ ಕ್ಲಿನಿಕ್)ಗಳಿಗೆ ಅವಶ್ಯವಿರುವ ಔಷಧ ಖರೀದಿ ಮತ್ತು ಸರಬರಾಜು ಮಾಡಲು ಆರೋಗ್ಯ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿದೆ. 2025-26ನೇ ಸಾಲಿನಲ್ಲಿ ಲಭ್ಯವಿರುವ ಅನುದಾನದಲ್ಲಿ 78.42 ಲಕ್ಷ ರೂ. ಬಳಸಿ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್‌ಎಂಎಸ್‌ಸಿಎಲ್) ಮೂಲಕ ಖರೀದಿಸಿ ಸರಬರಾಜು ಮಾಡುವಂತೆ ತಿಳಿಸಿದೆ. 2021-22ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಒಟ್ಟು 817 ನಮ್ಮ ಕ್ಲಿನಿಕ್‌ಗಳನ್ನು ತೆರೆಯಲು ಅನುಮೋದನೆ ನೀಡಲಾಗಿದ್ದು, ಈವರೆಗೆ 724 ನಮ್ಮ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಬಾಕಿ ಇರುವ 93 ಕ್ಲಿನಿಕ್‌ಗಳನ್ನು ಈ ತಿಂಗಳ ಅಂತ್ಯದೊಳಗೆ ತೆರೆಯಲು ಕ್ರಮವಹಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.