

ಚಿಕ್ಕಬಳ್ಳಾಪುರ: ಆಂಧ್ರದ ಗಡಿ ಭಾಗದಲ್ಲಿರುವ ಬಾಗೇಪಲ್ಲಿಗೆ ಕುಡಿಯುವ ನೀರಿನ ಪ್ರಮುಖ ಜಲಮೂಲವಾದ ಚಿತ್ರಾವತಿ ಜಲಾಶಯಕ್ಕೆ ನಾಯಕರ ಹೆಸರಿಡುವ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ.
ಒಂದು ಕಡೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಹೆಸರಿಗೆ ಅನುಮೋದನೆ ನೀಡಲು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಸರತ್ತು ನಡೆಸುತ್ತಿದ್ದರೆ, ಸ್ಥಳೀಯ ಹೋರಾಟಗಾರರು ಮಾತ್ರ ಮಾಜಿ ಶಾಸಕ ಹಾಗೂ ಸಿಪಿಎಂ ನಾಯಕ ದಿವಂಗತ ಜಿ.ವಿ.ಶ್ರೀರಾಮ ರೆಡ್ಡಿ ಹೆಸರು ಘೋಷಣೆಗೆ ಒತ್ತಡ ಹೇರುತ್ತಿವೆ. ರಾಜಕೀಯ ಒತ್ತಡ, ಹೋರಾಟದ ಬಿಸಿಗೆ ಅಧಿಕಾರಿಗಳು ಹೈರಾಣರಾಗುತ್ತಿದ್ದಾರೆ.
ಈಗಾಗಲೇ ಮಾಜಿ ಸಿಎಂ ಎಸ್.ಎಂ.ಕೃಷ್ಣ ಹೆಸರಿನ ಮರು ನಾಮಕರಣಕ್ಕೆ ಬಾಗೇಪಲ್ಲಿ ತಾಲೂಕು ಚಿತ್ರಾವತಿ ಹೋರಾಟ ಸಮಿತಿ ವಿರೋಧಿಸಿದೆ. ಆ.2 ರಂದು ಪುರಸಭೆ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡಿದೆ.
ಚಿತ್ರಾವತಿ ಎನ್ನುವುದು ಬಾಗೇಪಲ್ಲಿ ತಾಲೂಕಿನ ಜನತೆಯ ಭಾವನಾತ್ಮಕ ಬೆಸುಗೆ ಹಾಗೂ ಚಿತ್ರಾವತಿ ಜಲಾಶಯ ಎಂದರೆ ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ , ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಎಂದರೆ ಚಿತ್ರಾವತಿ ಜಲಾಶಯ ಎಂಬ ಭಾವನೆ ಕ್ಷೇತ್ರದ ಜನರಲ್ಲಿ ಇದೆ. ಇಲ್ಲಿ ಜಿ.ವಿ. ಶ್ರೀರಾಮರೆಡ್ಡಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಅವರ ದೂರದೃಷ್ಟಿ ಹಾಗೂ ಅವಿರತ ಹೋರಾಟದ ಒತ್ತಡದಿಂದ ಚಿತ್ರಾವತಿ ಜಲಾಶಯ ಅಸ್ತಿತ್ವಕ್ಕೆ ಬಂದಿದೆ. ಚಿತ್ರಾವತಿ ಜಲಾಶಯ ಹೆಸರು ಬದಲಾಯಿಸುವುದಾದರೇ ಚಿತ್ರಾವತಿ ಅಣೆಕಟ್ಟು
ನಿರ್ಮಾಣಕ್ಕೆ ಕಾರಣಕರ್ತರಾದವರ ಹೆಸರಿಡಬೇಕು. ಇದು ಬಿಟ್ಟು ದಿವಂಗತ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿಯವರ ಹೆಸರನ್ನು ಜನಮಾನಸದಿಂದ ದೂರ ಮಾಡುವ ಸಲುವಾಗಿ ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು ಚಿತ್ರಾವತಿ ಜಲಾಶಯದ ಹೆಸರನ್ನು “ಎಸ್.ಎಂ.ಕೃಷ್ಣ ಜಲಾಶಯ” ಎಂದು ಮರು ನಾಮಕರಣ ಮಾಡಲು ಹೊರಟಿರುವುದು ಖಂಡನೀಯ ಎಂದು ರಾಜ್ಯ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಕಿಡಿಕಾರಿದ್ದಾರೆ.
ಮತ್ತೊಂದೆಡೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಹೆಸರಿಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದನ್ನು ವಿರೋಧಿಸುವ ಅಗತ್ಯವಿಲ್ಲ ಎಂದು ಶಾಸಕ ಎಸ್.ಸುಬ್ಬಾರೆಡ್ಡಿ ಸಮರ್ಥಿಸಿಕೊಳ್ಳುತ್ತಿದ್ದಾರೆ.