ಮಕ್ಕಳಿಗೆ ಪುರಾಣದ ಪುಣ್ಯ ಪುರುಷರ ನಾಮಕರಣ - ಕದ್ರಿ ರಾಷ್ಟ್ರೀಯ ಮಕ್ಕಳ ಉತ್ಸವಕ್ಕೆ ಚಾಲನೆಗೈದು ಪೇಜಾವರ ಶ್ರೀ ಆಶಯ

Mng-sep14-kadri1
Published on

ಮಂಗಳೂರು: ನಮ್ಮ ಮಕ್ಕಳಿಗೆ ವೇದ, ಪುರಾಣ, ಉಪನಿಷತ್‌ಗಳಲ್ಲಿರುವ ಪುರಾಣದ ಪುಣ್ಯ ಪುರುಷರ ನಾಮಕರಣ ಮಾಡುವ ಮೂಲಕ ಸಂಸ್ಕೃತಿಯನ್ನು ಪರಿಚಯಿಸಿ ಸಮಾಜದಲ್ಲಿ ಉನ್ನತ ಪರಿವರ್ತನೆಗೆ ನಾಂದಿಯಾಗಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆವರಣದಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ಭಾನುವಾರ ಆಯೋಜಿಸಿದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣವೇಷ ಸ್ಪರ್ಧೆ ಉದ್ಘಾಟಿಸಿ, ಅವರು ಆಶೀರ್ವಚನ ನೀಡಿದರು.

ಮಕ್ಕಳಿಗೆ ಶ್ರೀ ಕೃಷ್ಣ ವೇಷ ಹಾಕುವ ಮೂಲಕ ಅವರಲ್ಲಿ ದೇವರನ್ನು ಕಾಣಬೇಕು. ಕಲ್ಕೂರ ಪ್ರತಿಷ್ಠಾನ ಕಳೆದ 43 ವರ್ಷಗಳಿಂದ ಈ ಅವಕಾಶ ಕಲ್ಪಿಸುತ್ತಿದೆ. ರಾಮನ, ಕೃಷ್ಣನ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಮುಂದಾಗಬೇಕು. ಮುಂದಿನ ವರ್ಷದಿಂದ ಪ್ರತಿಷ್ಠಾನ ಕೃಷ್ಣನ ಹೆಸರು ಇರುವವರನ್ನು ಕರೆದು ಗೌರವಿಸುವ ಕೆಲಸವಾಗಬೇಕು ಎಂದು ಶ್ರೀ ಸ್ವಾಮೀಜಿ ನುಡಿದರು.

ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ, ಶಾಸಕ ವೇದವ್ಯಾಸ ಕಾಮತ್, ಕದ್ರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ.ಶೆಟ್ಟಿ, ಶರವು ದೇವಳದ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ, ಭುವನಾಭಿರಾಮ ಉಡುಪ, ಜಿ.ಕೆ.ಭಟ್ ಸೇರಾಜೆ, ಸುಧಾಕರ ರಾವ್ ಪೇಜಾವರ, ರತ್ನಾಕರ ಜೈನ್, ಲೀಲಾಕ್ಷ ಕರ್ಕೇರ, ಮೋಹನ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ 12 ವೇದಿಕೆಗಳಲ್ಲಿ ಏಕಕಾಲದಲ್ಲಿ ವಿವಿಧ ವಿಭಾಗಗಳಲ್ಲಿ ಶ್ರೀಕೃಷ್ಣ ವೇಷ ಸ್ಫರ್ಧೆ ನಡೆಯಿತು. ರಾತ್ರಿ 12 ಗಂಟೆಗೆ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net