ಧರ್ಮಸ್ಥಳ ಸಂಸ್ಥೆಯಿಂದ ಸಮಾಜಮುಖಿ ಸೇವೆ

OCTOBER-2025-10-05
ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಬೆಕ್ಕಕೆರೆ ಗ್ರಾಮದ ನಮ್ಮೂರು ನಮ್ಮ ಕೆರೆ ಹಸ್ತಾಂತರ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ.ಉದಯ ಚಾಲನೆ ನೀಡಿದರು.
Published on

ಮದ್ದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ರಾಜ್ಯಾದ್ಯಂತ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಜತೆಗೆ ಮಹಿಳಾ ಸಬಲೀಕರಣಕ್ಕೂ ಹೆಚ್ಚಿನ ಒತ್ತು ನೀಡಿ ಸ್ವಾವಲಂಬಿ ಬದುಕನ್ನು ರೂಪಿಸುತ್ತಿರುವುದು ಉತ್ತಮ ಬೆಳವಣಿಗೆಯೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಆತಗೂರು ಹೋಬಳಿಯ ಬೆಕ್ಕಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ 895ನೇ ನಮ್ಮೂರು ನಮ್ಮ ಕೆರೆ ಹಸ್ತಾಂತರ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ಪರಿಣಾಮವಾಗಿ ಸರ್ಕಾರಕ್ಕೂ ಒತ್ತಡ ಕಡಿಮೆಯಾಗುತ್ತಿದೆ. ಧರ್ಮಾಧಿಕಾರಿಗಳು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸಮುದಾಯದ ಅಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸುವ ಜತೆಗೆ ಸುಮಾರು 8.34 ಲಕ್ಷ ರೂ.ಗಳಲ್ಲಿ ಅಭಿವೃದ್ಧಿಪಡಿಸಿರುವ ಕೆರೆಯನ್ನು ಅಭಿವೃದ್ಧಿಪಡಿಸಿ ಸ್ಥಳೀಯ ರೈತರಿಗೆ ಅನುಕೂಲ ಕಲ್ಪಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಜಿಲ್ಲೆ ಹಾಗೂ ತಾಲೂಕಿನಾದ್ಯಂತ ಸಂಸ್ಥೆಯು ನಿರಂತರವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವುದರ ಜತೆಗೆ ಹೈನುಗಾರಿಕೆ, ದೇವಾಲಯಗಳ ಪುನರುಜ್ಜೀವನ, ಕೆರೆಕಟ್ಟೆಗಳ ಸಂರಕ್ಷಣೆ, ನಿರ್ಗತಿಕರಿಗೆ ವಸತಿ ಸೌಲಭ್ಯ, ಮಾಸಾಶನ ಇನ್ನಿತರ ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸಿ ಎಲ್ಲ ವರ್ಗದ ಸಮುದಾಯದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಎಂ.ಚೇತನಾ ಮಾತನಾಡಿ ಜಿಲ್ಲೆಯಾದ್ಯಂತ ಸುಮಾರು 25ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಕೆರೆ ಸಮಿತಿಯ ಗೌರವಾಧ್ಯಕ್ಷೆ ಲಲಿತಾಸಿದ್ದರಾಜು ಮಾತನಾಡಿ, ಕೆರೆ ಅಭಿವೃದ್ಧಿಯಿಂದಾಗಿ ಗ್ರಾಮದಲ್ಲಿರುವ ಜಾನುವಾರುಗಳಿಗೆ ಮತ್ತು ಬೇಸಾಯಕ್ಕೆ ಹೆಚ್ಚಿನ ಉಪಯೋಗವಾಗಿದ್ದು ಈ ಹಿಂದೆ ಕೆರೆಯು ಗಿಡ ಗಂಟೆಳಿಂದ ಹೂಳು ತುಂಬಿಕೊಂಡು ಉಪಯೋಗಕ್ಕೆ ಬಾರದಿದ್ದ ಸಂದರ್ಭದಲ್ಲಿ ಕೆರೆ ಅಭಿವೃದ್ಧಿಗೊಳಿಸಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡಿರುವ ಸಂಸ್ಥೆಯ ಕಾರ್ಯವನ್ನು ಪ್ರಶಂಸಿದರು.

ಗ್ರಾ.ಪಂ. ಅಧ್ಯಕ್ಷ ಗೋವಿಂದ, ಸಮಿತಿಯ ಅಧ್ಯಕ್ಷರಾದ ಶಮಿತ್, ಪಿ.ಡಿ.ಒ. ಶಶಿಧರ್, ಜನಜಾಗೃತಿ ವೇದಿಕೆಯ ಲಿಂಗೇಗೌಡ, ಅಶೋಕ್, ಯೋಜನಾಧಿಕಾರಿ ಹಾಲಪ್ಪ, ಕೃಷಿ ಮೇಲ್ವಿಚಾರಕರಾದ ಆದರ್ಶ, ಲಕ್ಷ್ಮಮ್ಮ, ಚಂದ್ರಮ್ಮ, ಪವನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net