

ಭಟ್ಕಳ: ಇಲ್ಲಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ದೇವಿನಗರದಲ್ಲಿ ಹೊಸದಾಗಿ ನಾಮಫಲಕ ಅಳವಡಿಸುವ ವಿಷಯದಲ್ಲಿ ಹುಟ್ಟಿಕೊಂಡ ವಿವಾದ ಸದ್ಯಕ್ಕೆ ಬಗೆಹರಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ದಿನಕಳೆದಂತೆ ವಿಷಯ ಜಟಿಲಗೊಳ್ಳುತ್ತಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ದೇವಿನಗರಕ್ಕೆ ತೆರಳುವ ಕ್ರಾಸನಲ್ಲಿ ದೇವಿನಗರ ಎಂದು ಬರೆದ ಸಿಮೆಂಟಿನಿಂದ ನಿರ್ವಿುಸಿದ ಶಾಶ್ವತ ನಾಮಫಲಕಕ್ಕೆ ಬಣ್ಣ ಬಳಿದು ನೂತನವಾಗಿ ಹೆಸರು ಬರೆಸಿದ್ದರು. ಈ ಫಲಕ ಕಾಣುವುದಿಲ್ಲ ಎಂಬ ಕಾರಣಕ್ಕೆ ಪಕ್ಕದಲ್ಲಿ ಎತ್ತರವಾಗಿರುವ ಹೊಸ ಕಂಬವನ್ನು ಹಾಕಿ ಅಲ್ಲಿ ಇನ್ನೊಂದು ನಾಮಫಲಕ ಅಳವಡಿಸಲು ಸಿದ್ಧತೆ ನಡೆಸಿದ್ದರು. ಇದಕ್ಕೆ ಇನ್ನೊಂದು ಕೋಮಿನ ಯುವಕರು ವಿರೋಧವ್ಯಕ್ತಪಡಿಸಿ ಮಾತಿನ ಚಕಮಕಿ ನಡೆದಿತ್ತು. ಬಳಿಕ ಜಾಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸೋಮವಾರ ನಸುಕಿನ ಜಾವ ಕಂಬ ಕಿತ್ತಿರುವದು ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಆಕ್ರೋಶಗೊಂಡ ಹಿಂದು ಯುವಕರು ತಾಲೂಕಿನ ಮುಖಂಡರ ನೇತೃತ್ವದಲ್ಲಿ ಹೋರಾಟಕ್ಕೆ ಮುಂದಾಗಿದ್ದರು. ಇನ್ನೊಂದೆಡೆ ಇನ್ನೊಂದು ಕೋಮಿನವರು ಸಾಕಷ್ಟು ಸಂಖ್ಯೆಯಲ್ಲಿ ಜನರನ್ನು ಸೇರಿಸಬೇಕು ಎನ್ನುವ ಆಡೀಯೋ ವೈರಲ್ ಆಗಿದ್ದು ಸಂಘರ್ಷದ ಬೆಳವಣಿಗೆ ಸೂಚಿಸಿತ್ತು.
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರವಾರದ ಎಡಿಶನಲ್ ಎಸ್ಪಿ ತ್ರಿಲೋಕ ಕುಮಾರ, ಜಿಲ್ಲೆಯ 3 ಡಿವೈಎಸ್ಪಿ ಸೇರಿದಂತೆ ವಿವಿಧ ತಾಲೂಕುಗಳ ಪೊಲೀಸರ ತುಕಡಿಯನ್ನು ಜಾಲಿಯಲ್ಲಿ ನೀಯೋಜಿಸಿದ್ದಾರೆ. ಹೋರಾಟ ಕೈ ಬಿಟ್ಟು ಶಾಂತಿಯುತ ಮಾತುಕತೆ ನಡೆಸಿ ವಿವಾದ ಬಗೆಹರಿಸಿಕೊಳ್ಳುವಂತೆ ಮನವಿಮಾಡಿಕೊಂಡಿದ್ದಾರೆ. ಆದರೆ ಇದ್ಯಾವುದಕ್ಕೂ ಮಣಿಯದ ಮಣಿಯದ ಹಿಂದೂ ಯುವಕರು ಬೋರ್ಡ್ ಹಾಕುವವರೆಗೂ ವಿರಮಿಸುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಗೊಂದಲದ ವಾತವರಣ ನಿರ್ವಣವಾಗುತ್ತಿದ್ದಂತೆ ತಹಸೀಲ್ದಾರ್ ತೀಪ್ಪೇಸ್ವಾಮಿ ಎರಡು ದಿನಗಳ ಗಡುವು ನೀಡುವಂತೆ ಕೋರಿಕೊಂಡಿದ್ದಾರೆ.
ದೇಶದಾದ್ಯಂತ ಜನರು ಶ್ರೀರಾಮ ಜನ್ಮಭೂಮಿಯಲ್ಲಿ ನಡೆಯುವ ಮಂದಿರ ಉದ್ಘಾಟನೆಯ ಸಂಭ್ರಮ ನೆಲೆಸಿರುವ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ಸುಬ್ರಾಯ ದೇವಾಡಿಗ ಹೇಳಿದರು. ಭಟ್ಕಳ ಜಾಲಿಯ ಸಿದ್ಧಿವಿನಾಯಕ ಯುವಕ ಮಂಡಳದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ತಾಲೂಕಿನ ಜಾಲಿ ದೇವಿನಗರಕ್ಕೆ ತೆರಳುವ ಮಾರ್ಗದಲ್ಲಿ 40ವರ್ಷಗಳಿಂದ ನಾಮಫಲಕ ಇದೆ. ಪ್ರತಿ ಸಂಕ್ರಾಂತಿ ಸಮಯದಲ್ಲಿ ಬಣ್ಣ ಬಳಿಯುವದು ವಾಡಿಕೆ. ಆದರೆ ಪಟ್ಟಣ ಪಂಚಾಯಿತಿ ಅಲ್ಪಸಂಖ್ಯಾತರ ತುಷ್ಟಿಕರಣಕ್ಕೆ ಮುಂದಾಗಿ ನಾಮಫಲಕ ಕಿತ್ತು ಹಾಕಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ಆಸರಕೇರಿ ಕೃಷ್ಣಾ ನಾಯ್ಕ, ಮಾಜಿಯೋಧ ಶ್ರೀಕಾಂತ ನಾಯ್ಕ, ಜಾಲಿ ಪಟ್ಟಣ ಪಂಚಾಯಿತಿ ಸದಸ್ಯ ದಯಾನಂದ ನಾಯ್ಕ, ರಾಘು ಮುಟ್ಟಳ್ಳಿ, ನಾಗೇಶ ನಾಯ್ಕ, ಶ್ರೀನಿವಾಸ ನಾಯ್ಕ ಮತ್ತಿತರರಿದ್ದರು.
ಮದ್ರಸಾ ಕಟ್ಟಡ ಪರವಾನಿಗೆ ಪಡೆದು ಮಕ್ಕಾ ಜುಮ್ಮಾ ಮಸೀದಿಯಾಗಿ ಪರಿವರ್ತಿಸಿ ಅನಧಿಕೃತವಾಗಿ ಮಸೀದಿ ನಿಮಾಣ ಮಾಡಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜಾಲಿ ದೇವಿನಗರ ಸಾರ್ವಜನಿಕರು ಜಾಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಕಳೆದ ಹಲವಾರು ವರ್ಷಗಳ ಹಿಂದೆ ಜಾಲಿ ಗ್ರಾಮದಲ್ಲಿ ಮದ್ರಸಾ ಶಿಕ್ಷಣ ನೀಡುವ ಉದ್ದೇಶ ಇಟ್ಟುಕೊಂಡು ಹಯಾತಲ್ ಇಸ್ಲಾಮ್ ಮದ್ರಸಾ ಎಂಬ ಹೆಸರನ್ನಿಟ್ಟುಕೊಂಡು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಈ ಕಟ್ಟಡದ ಎರಡನೇ ಮಹಡಿಗೆ ಪಟ್ಟಣ ಪಂಚಾಯಿತಿಯಿಂದ ಯಾವುದೇ ಪರವಾನಿಗೆ ಪಡೆದಿಲ್ಲ. ಮಕ್ಕಾ ಜುಮ್ಮಾ ಮಸೀದಿಯಾಗಿ ಪರಿವರ್ತಿಸಿ ಕಾನೂನು ಬಾಹಿರವಾಗಿ ನಡೆಸಿಕೊಂಡು ಬಂದಿರುತ್ತಾರೆ. ಕಾರಣ ಈ ಏರಿಯಾದಲ್ಲಿ 14 ಮನೆಗಳಿದ್ದು ಈಗಾಗಲೇ ಒಂದು ಮಸೀದಿ ಇರುತ್ತದೆ. ಆದ್ದರಿಂದ ಕಾನೂನು ಬಾಹಿರವಾಗಿ ನಿರ್ವಿುಸಿರುವ ಈ ಮಸೀದಿಯ ಮೇಲೆ ಕಾನೂನು ಕ್ರಮ ಕೈಗೊಂಡು ಮಸೀದಿಯಲ್ಲಿರುವ ಮೈಕ್ ತೆರವುಗೊಳಿಸಬೇಕಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಂಜಪ್ಪ, ಈ ಜಾಗ ಯಾರದು? ಹಾಗೂ ಯಾವ ಇಲಾಖೆಗೆ ಸೇರಿದೆ ಎಂದು ಪರಿಶೀಲಿಸುತ್ತೇನೆ. ಅರಣ್ಯ ಇಲಾಖೆ ಸೇರಿದ ಜಾಗವಾದರೆ ಅವರಿಗೆ ಇಂದೇ ಪತ್ರ ಬರೆಯುತ್ತೇನೆ ಎಂದರು.
ಜಾಲಿಯಲ್ಲಿ ನಾಮಫಲಕ ಅಳವಡಿಕೆ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಹೋರಾಟಕ್ಕೆ ಇಳಿದ ಯುವಕರಿಗೆ ದುಬೈಯಿಂದ ಜೀವ ಬೆದರಿಕೆ ಹಾಕಿರುವ ವಿಡಿಯೋ ಒಂದು ವೈರಲ್ ಆಗಿದೆ.
ವ್ಯಕ್ತಿಯೊಬ್ಬ ದುಬೈನಿಂದ ವಿಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದು, ‘ನಾನು ಭಟ್ಕಳಕ್ಕೆ ಬಂದು ನಿಮಗೊಂದು ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದು, ಮನೆಯೊಳಗೆ ನುಗ್ಗಿ ಹೊಡೆಯುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ವಿಡಿಯೋ ತುಣುಕು ಸಂಬಂಧಿಸಿ ಠಾಣೆಗೆ ದೂರು ನೀಡುವುದಾಗಿ ಹೋರಾಟಗಾರರು ತಿಳಿಸಿದ್ದಾರೆ.