ಕ್ರೀಡಾಂಗಣಕ್ಕೆ ಹರ್ಷವೆಂದು ನಾಮಕರಣ ಮಾಡಿ

kls manavi
ಕಳಸ ಯುವಕ ಸಂಘದಿಂದ ಪಿಡಿಒ ಕವೀಶ್‌ಗೆ ಮನವಿ ಪತ್ರ ಸಲ್ಲಿಸಿದರು. ಗ್ರಾಪಂ ಉಪಾಧ್ಯಕ್ಷ ರಂಗನಾಥ್, ಸಂತೋಷ್ ಹಿನಾರಿ, ಚಂಪಾ ಎಂ. ರಾವ್, ಟಿ.ಅಶೋಕ್ ಇತರರಿದ್ದರು.
Published on

ಕಳಸ: ಕಳಸದ ಧಾರ್ಮಿಕ, ರಾಜಕೀಯ, ಕ್ರೀಡಾ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಅಪಾರ ಸೇವೆ ಸಲ್ಲಿಸಿ ಅಕಾಲಿಕ ಮರಣ ಹೊಂದಿದ ಎನ್.ಎಂ.ಹರ್ಷ ಅವರ ಹೆಸರನ್ನು ಪದವಿಪೂರ್ವ ಕಾಲೇಜಿನ ಕ್ರೀಡಾಂಗಣಕ್ಕೆ ನಾಮಕರಣ ಮಾಡುವಂತೆ ಯುವಕ ಸಂಘದಿಂದ ಗ್ರಾಮ ಪಂಚಾಯಿತಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಎನ್.ಎಂ.ಹರ್ಷ ಕಳಸದ ಎಲ್ಲ ಆಗುಹೋಗುಗಳಲ್ಲಿ ಪ್ರಾಮಾಣಿಕವಾಗಿ, ನಿಸ್ವಾರ್ಥದಿಂದ ಪಾಲ್ಗೊಳ್ಳುತ್ತಿದ್ದರು. ಕಳಸ ಯುವಕ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದರು. ಆರೋಗ್ಯ ಶಿಬಿರ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾ ಪಂದ್ಯಾವಳಿಗಳು, ಯುವಜನ ಮೇಳಗಳನ್ನು ಆಯೋಜಿಸಿ ಯಶಸ್ವಿಗೊಳಿಸಿದ್ದರು. ಕಳಸದ ಹೊಸದೇವರ ಚಾವಡಿ ಧರ್ಮದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಹೀಗೆ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಅವರ ಅಕಾಲಿಕ ನಿಧನದ ನಂತರ ಕಳಸ ಒಬ್ಬ ಸಕಲ ಕಲಾವಲ್ಲಭನನ್ನು ಕಳೆದುಕೊಂಡು ಅಪಾರ ನಷ್ಟ ಅನುಭವಿಸುತ್ತಿದೆ. ಅವರ ನೆನಪು ಜನಮಾನಸದಲ್ಲಿ ಶಾಶ್ವತವಾಗಿ ಇರಬೇಕು ಎಂಬುದು ಬಹುತೇಕ ಸ್ಥಳೀಯರ ಅಭಿಪ್ರಾಯ ಆಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಪದವಿಪೂರ್ವ ಕಾಲೇಜಿನ ಕ್ರೀಡಾಂಗಣವನ್ನು 3 ದಶಕದ ಹಿಂದೆ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಹಿರಿಯ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿ ನಿರ್ಮಾಣ ಮಾಡಿಸುವುದರಲ್ಲಿ ಹರ್ಷ ಅವರ ಪಾತ್ರ ದೊಡ್ಡದು. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಎನ್.ಎಂ.ಹರ್ಷ ಅವರ ಹೆಸರನ್ನೇ ಇರಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮನವಿ ಪತ್ರವನ್ನು ಕಳಸ ಪಿಡಿಒ ಕವೀಶ್ ಅವರಿಗೆ ಸಲ್ಲಿಸಿದರು. ಗ್ರಾಪಂ ಉಪಾಧ್ಯಕ್ಷ ರಂಗನಾಥ್, ಸದಸ್ಯ ಸಂತೋಷ್ ಹಿನಾರಿ, ಚಂಪಾ ಎಂ. ರಾವ್, ಕಳಸ ಯುವಕ ಸಂಘದ ಸದಸ್ಯರಾದ ರವಿ ಕೆಳಂಗಡಿ, ವೀರೇಂದ್ರ ಜೈನ್, ಟಿ.ಅಶೋಕ್, ಸತ್ಯೇಂದ್ರ ಜೈನ್, ತೋಮಸ್, ಮೋಹನ್ ಭಂಡಾರಿ, ಲಕ್ಷ್ಮೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net