ಕಾಂಗ್ರೆಸ್ ಗೆಲ್ಲುವ 4 ಕ್ಷೇತ್ರಗಳ ಹೆಸರು ಹೇಳಿ:ಬಿಎಸ್‌ವೈ

bsy
ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
Published on

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ನಾಲ್ಕು ಕ್ಷೇತ್ರಗಳ ಹೆಸರನ್ನು ಸಿಎಂ ಸಿದ್ದರಾಮಯ್ಯ ಹೇಳಲಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ನಾಯಕರಾದ ಅವರು ಕಾಂಗ್ರೆಸ್ ಸೋಲುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ 20 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಅವರು ಗೆಲ್ಲುವ ಕ್ಷೇತ್ರಗಳ ಜತೆಗೆ ಅವರ ಮುಂದಿನ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಲಿ ಎಂದು ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 28 ಕ್ಷೇತ್ರಗಳನ್ನೂ ಗೆಲ್ಲುವ ನಿರೀಕ್ಷೆ ಬಿಜೆಪಿಗಿದೆ. ಶಿವಮೊಗ್ಗದಲ್ಲಿ ರಾಘವೇಂದ್ರ ಜನರ ಅಪೇಕ್ಷೆಗೆ ತಕ್ಕಂತೆ ಶೇ.95 ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳೇ ಅವರನ್ನು ಗೆಲ್ಲಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಗಾಳಿ ಎಲ್ಲೆಡೆ ವ್ಯಾಪಿಸಿದೆ. ರಾಜ್ಯಾದ್ಯಂತ ಮೋದಿ ಅಲೆಯಿದೆ. ಹೀಗಾಗಿ ಕಾಂಗ್ರೆಸ್‌ನವರು ಕಂಗಾಲಾಗಿದ್ದಾರೆ. ಬಿಜೆಪಿ ಹಾಗೂ ಮೋದಿ ಮೇಲೆ ವೃಥಾ ಆರೋಪ ಮಾಡುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಈಶ್ವರಪ್ಪ ನಾಮಪತ್ರ ಹಿಂಪಡೆಯದೆ ಚುನಾವಣಾ ಕಣದಲ್ಲಿ ಉಳಿದಿರುವ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಏಕೆ ಅದರ ಬಗ್ಗೆ ಮಾತನಾಡಲಿ ಎಂದು ಮರು ಪ್ರಶ್ನಿಸಿದರು.
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ ವಹಿಸುವುದಾಗಿ ಘೋಷಿಸಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಮೋದಿ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಲಘುವಾಗಿ ಮಾತನಾಡಿದ್ದಾರೆ. ರಸ್ತೆಯಲ್ಲಿ ಹೋಗುವರೆಲ್ಲ ಮಾತನಾಡಿದರೆ ಮೋದಿ ಗೌರವ ಕಡಿಮೆಯಾಗುವುದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net