

ಚಿಕ್ಕಬಳ್ಳಾಪುರ: ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ಬರೋಬ್ಬರಿ 94806 (ಜೂನ್ ಅಂತ್ಯಕ್ಕೆ) ಅರ್ಜಿಗಳು ಸಲ್ಲಿಕೆಯಾಗಿವೆ.
ಕುಶಲ ಕರ್ಮಿಗಳ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಕಳೆದ 2023 ನೇ ಸಾಲಿನ ಸೆ.17 ರಂದು ಜಾರಿಗೆ ತಂದಿದ್ದು ಇದರಡಿ ವಿಶೇಷ ಭತ್ಯೆಯೊಂದಿಗೆ ಉಚಿತ ತರಬೇತಿ ಮತ್ತು ಸಾಲ ಸೌಲಭ್ಯ ಸಿಗುತ್ತದೆ. ಇದಕ್ಕೆ ಆನ್ ಲೈನ್ ಮೂಲಕ ಜಿಲ್ಲಾ ವ್ಯಾಪ್ತಿಯಲ್ಲಿ 94,806 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಂತೆ ಮೊದಲ ಹಂತದಲ್ಲಿ 41,508 ಅರ್ಜಿಗಳು ಮತ್ತು ಎರಡನೇ ಹಂತದಲ್ಲಿ 22,123 ಅರ್ಜಿಗಳನ್ನು ಪರಿಶೀಲಿಸಿದ್ದು ಬಾಕಿ ಉಳಿದವನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುತ್ತದೆ ಎಂಬುದಾಗಿ ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿ ಮಾಹಿತಿ ನೀಡಿದೆ.
*ವಿಶೇಷ ತರಬೇತಿ
ಬಡಗಿ, ದೋಣಿ, ಶಸ್ತ್ರ, ಚಾಪೆ/ಬುಟ್ಟಿ/ಪೊರಕೆ/ತೆಂಗಿನಾರು, ಬೊಂಬೆ ಮತ್ತು ಆಟಿಕೆ ಉತ್ಪನ್ನ, ಮೀನಿನ ಬಲೆ, ಬೀಗ ತಯಾರಿಕೆ ಮತ್ತು ಕಮ್ಮಾರಿಕೆ, ಅಕ್ಕಸಾಲಿಗ, ಕುಂಬಾರಿಕೆ, ಶಿಲ್ಪಕಲೆ( ಮೂರ್ತಿ ಮತ್ತು ಕಲ್ಲಿನ ಕೆತ್ತನೆ), ಕಲ್ಲು ಕುಟಿಕ, ಚಮ್ಮಾರಿಕೆ, ಗಾರೆ ಕೆಲಸ, ಹೂಮಾಲೆ ತಯಾರಕರು, ದೋಬಿ, ಟೈಲರ್, ವಿವಿಧ ವೃತ್ತಿಪರ ಕೆಲಸಗಳಿಗೆ ಎರಡು ಹಂತದಲ್ಲಿ (5 ದಿನಗಳು ಮತ್ತು 15 ದಿನಗಳು) ಉಚಿತ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತದೆ. ನೋಂದಾಯಿತರಿಗೆ ದಿನಕ್ಕೆ ತಲಾ 500 ರೂ ವಿಶೇಷ ಭತ್ಯೆ, ಕೌಶಲ ಮಟ್ಟವನ್ನು ಪರಿಶೀಲಿಸಿದ ಬಳಿಕ ಟೂಲ್ ಕಿಟ್ ಖರೀದಿಗೆ 15 ಸಾವಿರ ರೂ ಅನುದಾನ ನೀಡಲಾಗುತ್ತಿದೆ. ಹಾಗೆಯೇ ತರಬೇತಿ ಮುಗಿದ ಬಳಿಕ ಬ್ಯಾಂಕುಗಳಿಂದ ಮೊದಲು 1 ಲಕ್ಷ ರೂ, ಬಳಿಕ 2 ಲಕ್ಷ ರೂಗಳ ಸಾಲವನ್ನು ಶೇ.5 ರ ಬಡ್ಡಿ ದರದಲ್ಲಿ ಕೊಡಿಸಲಾಗುತ್ತದೆ.
*ವ್ಯಾಪಾಸ್ಥರಿಗೆ ಪಿಎಂ ನೆರವು
ನಗರ ಪ್ರದೇಶದಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯಡಿ ವಿವಿಧ ಹಂತದ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
10 ಸಾವಿರ ರೂ ಸಾಲ, 20 ಸಾವಿರ ರೂ ಸಾಲ, 50 ಸಾವಿರ ರೂ ಸಾಲ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ನೆರವು ಒದಗಿಸಲಾಗುತ್ತಿದೆ.
ಎಂದು ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿ ಮಾಹಿತಿ ನೀಡಿದೆ.