

ಮಂಗಳೂರು: ಸೈನಿಕನೆಂದು ನಂಬಿಸಿ ಹಿರಿಯ ನಾಗರಿಕರೋರ್ವರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.
ಹಿರಿಯ ನಾಗರಿಕರೋರ್ವರು ತಮ್ಮ ಅಪಾರ್ಟ್‌ಮೆಂಟ್‌ನ್ನು ಬಾಡಿಗೆ ನೀಡುವ ಬಗ್ಗೆ ‘ಮ್ಯಾಜಿಕ್ ಬ್ರಿಕ್’ನಲ್ಲಿ ಜಾಹೀರಾತು ಹಾಕಿದ್ದರು. ಅದನ್ನು ನೋಡಿ ಡಿ.8ರಂದು ಅಪರಿಚಿತನೋರ್ವ ಆತನನ್ನು ಆಶೀಶ್ ಕುಮಾರ್ ಎಂದು, ತಾನು ಸೈನಿಕನಾಗಿರುವುದಾಗಿಯೂ ಪರಿಚಯಿಸಿಕೊಂಡು ಬಾಡಿಗೆ ವಿಷಯವಾಗಿ ವಿಚಾರಿಸಿದ. ಮುಂಗಡ ಹಣ ಪಾವತಿಸುತ್ತೇನೆ. ಅನಂತರ ಆರ್ಮಿಯ ಕಮಾಂಡಿಂಗ್ ಪೇಮೆಂಟ್‌ನಿಂದಲೇ ಹಣ ಸಂದಾಯವಾಗಲಿದೆ ಎಂದು ಹೇಳಿದ. 1 ರೂ., 5 ರೂ ಮತ್ತು 49,999 ರೂ.ಗಳ ಯುಪಿಐ ಕೋಡ್‌ನ್ನು ಹಿರಿಯ ನಾಗರಿಕರಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ. ಇದನ್ನು ಸತ್ಯವೆಂದು ನಂಬಿದ ಹಿರಿಯ ನಾಗರಿಕರು ಆತ ಹೇಳಿದಂತೆ ಮಾಡಿದ್ದರು. ಆದರೆ ಅವರ ಖಾತೆಗೆ ಹಣ ಬರಲಿಲ್ಲ. ಬದಲಾಗಿ ಡಿ.8ರಂದು ಅವರ ಖಾತೆಯಿಂದಲೇ 1,41,999 ರೂ. ಅಪರಿಚಿತರ ಖಾತೆಗೆ ವರ್ಗಾವಣೆಗೊಂಡಿತ್ತು.
ಡಿ.9ರಂದು ಕರೆ ಮಾಡಿದ ಆರೋಪಿ ಮತ್ತೊಮ್ಮೆ ಈ ಹಿಂದಿನಂತೆಯೇ ಯುಪಿಐ ಕೋಡ್‌ನ್ನು ಬಳಕೆ ಮಾಡುವಂತೆ ತಿಳಿಸಿದ. ಅನಂತರ ಆರ್ಮಿ ಇಲಾಖೆಯಿಂದ ಹಣ ಪಾವತಿಯಾಗಲಿದೆ ಎಂದೂ ನಂಬಿಸಿದ. ಹಿರಿಯ ನಾಗರಿಕರು ಅದೇ ರೀತಿ ಮಾಡಿದರು. ಅವರ ಖಾತೆಯಿಂದ ಮತ್ತೆ 1 ಲ.ರೂ. ವಗಾರ್ವಣೆಯಾಗಿತ್ತು. ಅವರ ಖಾತೆಗೆ ಯಾವುದೇ ಹಣ ಜಮೆಯಾಗಿರಲಿಲ್ಲ. ಅವರ ಖಾತೆಯಿಂದಲೇ ಆರೋಪಿ ಆನ್‌ಲೈನ್ ಮೂಲಕ 2,41,999 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದ. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.