ನಿಯಮ ಮೀರಿ ನಾಮ ನಿರ್ದೇಶನ

Name directive beyond the rule
ದೇವರಹಿಪ್ಪರಗಿ ಪಟ್ಟಣದ ಆಶ್ರಯ ಸಮಿತಿಗೆ ಕಾನೂನು, ನಿಯಮಗಳ ಚೌಕಟ್ಟು ಮೀರಿ ಸದಸ್ಯರನ್ನು ನಾಮ ನಿರ್ದೇಶನ ಮಾಡಿದ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಮುಖ್ಯಾಕಾರಿ ಎಸ್.ಎಸ್. ಬಾಗಲಕೋಟ ಅವರಿಗೆ ಮನವಿ ಸಲ್ಲಿಸಿದರು.
Published on

ದೇವರಹಿಪ್ಪರಗಿ: ಪಟ್ಟಣದ ಆಶ್ರಯ ಸಮಿತಿಗೆ ಕಾನೂನು, ನಿಯಮಗಳ ಚೌಕಟ್ಟು ಮೀರಿ ಸದಸ್ಯರನ್ನು ನಾಮ ನಿರ್ದೇಶನ ಮಾಡಿದ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಮುಖ್ಯಾಧಿಕಾರಿ ಎಸ್.ಎಸ್. ಬಾಗಲಕೋಟ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಪಂಚಾಯಿತಿ ಕಾರ್ಯಾಲಯಕ್ಕೆ ಶುಕ್ರವಾರ ಆಗಮಿಸಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸರ್ಕಾರದ ನಾಮ ನಿರ್ದೇಶನ ಕ್ರಮವನ್ನು ಖಂಡಿಸಿದರು.

ಸದಸ್ಯ ರಮೇಶ ಮಸಬಿನಾಳ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಕೆಲವು ಸಮಿತಿಗಳಿಗೆ ಸದಸ್ಯರನ್ನು ಕಾನೂನು ವ್ಯಾಪ್ತಿ, ಚೌಕಟ್ಟನ್ನು ಅರಿಯದೇ ಬೇಕಾಬಿಟ್ಟಿಯಾಗಿ ಕೇವಲ ಕೆಲವೇ ಸಮುದಾಯಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾಮ ನಿರ್ದೇಶನ ಮಾಡುತ್ತಿದ್ದು, ಇದಕ್ಕೆ ಪಟ್ಟಣದ ಆಶ್ರಯ ಸಮಿತಿಗೆ ನಾಮ ನಿರ್ದೇಶನ ಮಾಡಿದ ಪ್ರಕ್ರಿಯೆಯೇ ಉತ್ತಮ ಉದಾಹರಣೆಯಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ವಾಸಿಸುವ ಹಾಗೂ ಪಟ್ಟಣದ ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯನ್ನು ಮಾತ್ರ ನಾಮ ನಿರ್ದೇಶನ ಮಾಡುವ ನಿಯಮವಿದ್ದಾಗ್ಯೂ ಸಹ ಮಣೂರ ಹಾಗೂ ಬೇರೆ ತಾಲೂಕಿನ ತೆನೆಹಳ್ಳಿ ಗ್ರಾಮದ ವ್ಯಕ್ತಿಗಳಿಗೆ ಆಶ್ರಯ ಸಮಿತಿಗೆ ನಾಮ ನಿರ್ದೇಶನ ಸದಸ್ಯರನ್ನಾಗಿ ಮಾಡಿ ಆದೇಶಿಸಲಾಗಿದೆ. ಇದು ಕಾನೂನಿನ ನಿಯಮಗಳಿಗೆ ವಿರುದ್ಧವಾಗಿದೆ ಇದಕ್ಕೆ ಸಂಬಂಧಿಸಿದ ದಾಖಲೆಗಳ ಸಹಿತ ಇದನ್ನು ಖಂಡಿಸುತ್ತೇವೆ ಎಂದರು.

ಕಾಂಗ್ರೆಸ್ ಸರ್ಕಾರ ಈಗಾಗಲೇ ಪಟ್ಟಣ ಪಂಚಾಯಿತಿ, ಕೆಡಿಪಿ, ಆಶ್ರಯ ಸಮಿತಿ ಸದಸ್ಯರನ್ನು ನಾಮ ನಿರ್ದೇಶನ ಮಾಡಿದ್ದು ಬಹುತೇಕ ಎಲ್ಲದರಲ್ಲಿಯೂ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದೇ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಯಾಕೆ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತರು ಮತ ನೀಡಿಲ್ಲವೇ? ಯಾಕೆ ಇದನ್ನು ಉದ್ದೇಶಪೂರ್ವವಾಗಿ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಸಹಿತ ಮತಕ್ಷೇತ್ರದ ಕಾಂಗ್ರೆಸ್ ನಾಯಕರು ಉತ್ತರಿಸಬೇಕಾಗಿದೆ. ಈಗಾಗಲೇ ರಾಜ್ಯದ ಕಾಂಗ್ರೆಸ್ ಸರ್ಕಾರ ನೂರಾರು ಹಗರಣಗಳಲ್ಲಿ ಸಿಲುಕಿ ಒದ್ದಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಲಿಂಗಾಯಿತ ಸಮುದಾಯಕ್ಕೆ ಪದೇ ಪದೇ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿ, ಜೆಡಿಎಸ್ ನಾಯಕರಿಂದ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಶಾಂತಯ್ಯ ಜಡಿಮಠ, ಕಾಸುಗೌಡ ಬಿರಾದಾರ (ಜಲಕತ್ತಿ), ಸಿಂಧೂರ ಡಾಲೇರ, ಸುಮಂಗಲಾ ಸೇಬೆನವರ ಸೇರಿದಂತೆ ಸೋಮು ದೇವೂರ, ವಿನೋದ ಚವ್ಹಾಣ, ಮಲ್ಲು ಜಡಿಮಠ, ಬಸವರಾಜ ದೇವಣಗಾಂವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net