ಸಂದರ್ಶಕರ ಪುಸ್ತಕದಲ್ಲಿ ವಿಚಿತ್ರ ಮಾಹಿತಿ

BHETHI
ಗಂಗಾವತಿ ತಾಪಂ ಕಚೇರಿ ಆವರಣದ ಮುಖ್ಯ ಗ್ರಂಥಾಲಯ ಕೇಂದ್ರಕ್ಕೆ ನಗರಸಭೆ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ, ಓದುಗರಿಂದ ಸಮಸ್ಯೆಗಳ ಅಹವಾಲು ಆಲಿಸಿತು. ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಪರಿಸರ ಇಂಜಿನಿಯರ್ ಚೇತನನಾಯ್ಕ, ಗ್ರಂಥಪಾಲಕಿ ಕವಿತಾ ಇತರರಿದ್ದರು.
Published on

ಗಂಗಾವತಿ: ನಗರದ ತಾಪಂ ಕಚೇರಿ ಆವರಣದಲ್ಲಿರುವ ಮುಖ್ಯ ಗ್ರಂಥಾಲಯ ಕೇಂದ್ರಕ್ಕೆ ನಗರಸಭೆ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ, ಓದುಗರಿಂದ ಸಮಸ್ಯೆಗಳ ಅಹವಾಲು ಆಲಿಸಿತು.

ತಾಲೂಕಿಗೆ ಒಂದೇ ಗ್ರಂಥಾಲಯವಿದ್ದು, ಓದುಗರ ಸಂಖ್ಯೆ ಹೆಚ್ಚಿದೆ. ಸ್ಥಳದ ಆಭಾವದಿಂದ ಹೊರಗಡೆ ಓದುವ ಸ್ಥಿತಿಯಿತ್ತು. ಈ ಬಗ್ಗೆ ಓದುಗರೊಬ್ಬರು ಜಿಲ್ಲಾಡಳಿತಕ್ಕೆ ದೂರು ನೀಡಿರುವ ಹಿನ್ನೆಲೆಯಲ್ಲಿ ಡಿಸಿ ಸೂಚನೆಯಂತೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

ಗ್ರಂಥಾಲಯದಲ್ಲಿನ ಆಸನ, ಕುಡಿವ ನೀರು, ಶೌಚಗೃಹ ವ್ಯವಸ್ಥೆ, ದಿನಪತ್ರಿಕೆ, ಸ್ಪರ್ಧಾತ್ಮಕ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದುಕೊಂಡಿತು. ಗ್ರಂಥಾಲಯದಲ್ಲಿದ್ದ ಸಹಾಯಕ ಗ್ರಂಥಪಾಲಕಿ ಕವಿತಾರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿತು.

ಇದೇ ಸಂದರ್ಭದಲ್ಲಿ ಓದುಗರು ಅಧಿಕಾರಿಗಳಿಗೆ ದೂರುಗಳನ್ನು ಹೇಳಿದರು. ಸಮಯಕ್ಕೆ ಸರಿಯಾಗಿ ಗ್ರಂಥಾಲಯ ತೆರೆಯುತ್ತಿಲ್ಲ, ರಾತ್ರಿ 8 ಗಂಟೆವರೆಗೆ ಓದಲು ಅವಕಾಶ ನೀಡಲ್ಲ. ಆಸನದ ಕೊರತೆಯಿದ್ದು, ಒಮ್ಮೊಮ್ಮೆ ಕುಡಿವ ನೀರಿನ ವ್ಯವಸ್ಥೆಯೂ ಇರಲ್ಲ. ಜಿಲ್ಲಾ ಗ್ರಂಥಾಲಯದಲ್ಲಿರುವಂತೆ ರಜೆ ದಿನದಲ್ಲೂ ಗ್ರಂಥಾಲಯ ತೆರೆಯಬೇಕಿದ್ದು, ರಾತ್ರಿ ವೇಳೆ ಓದಲು ಅವಕಾಶ ಕಲ್ಪಿಸಬೇಕು. ದಿನದಿಂದ ದಿನಕ್ಕೆ ಓದುಗರ ಸಂಖ್ಯೆ ಹೆಚ್ಚುತ್ತಿದ್ದು, ಪಕ್ಕದಲ್ಲಿರುವ ಶ್ರೀಕೃಷ್ಣ ದೇವರಾಯ ಕಲಾಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಬೇಕಿದೆ. ಓದುಗರೊಂದಿಗೆ ಗ್ರಂಥಪಾಲಕಿ ಸರಿಯಾಗಿ ವರ್ತಿಸುತ್ತಿಲ್ಲ ಎಂದು ದೂರಿದರು.

ಕಣ್ಣೀರಿಟ್ಟ ಗ್ರಂಥಪಾಲಕಿ: ಅಧಿಕಾರಿಗಳು ಓದುಗರ ಸಮಸ್ಯೆ ಆಲಿಸುತ್ತಿದ್ದಾಗ, ಗ್ರಂಥಪಾಲಕಿ ಕವಿತಾ ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಕುಡಿವ ನೀರಿನ ವ್ಯವಸ್ಥೆ ಮಾಡಿದ್ದೇನೆ, ಶೌಚಗೃಹ ಕಟ್ಟಿಸಿದ್ದೇನೆ. ಇಲಾಖೆ ಸೂಚನೆಯಂತೆ ಓದುಗರು ಸದಸ್ಯತ್ವ ಪಡೆಯಬೇಕಿದ್ದು, ಒಬ್ಬರೂ ಪಡೆದುಕೊಂಡಿಲ್ಲ. ಹೆಚ್ಚುವರಿ ಕಟ್ಟಡಕ್ಕಾಗಿ ಪ್ರಸ್ತಾವನೆ ಸಲ್ಲಿಸಿದರೂ ಇದುವರೆಗೂ ಈಡೇರಿಲ್ಲ. ಸಂದರ್ಶನ ಪುಸ್ತಕದಲ್ಲಿ ವಿವರ ನೀಡುವಂತೆ ಓದುಗರಿಗೆ ತಿಳಿಸಿದರೆ ಕೆಲವರು ಉಡಾೆಯಿಂದ ವರ್ತಿಸುತ್ತಿದ್ದಾರೆ. ಸಂಬಂಧವಿಲ್ಲದ ಮಾಹಿತಿ ಬರೆದು, ನಿರ್ಲಕ್ಷಿಸುತ್ತಿದ್ದಾರೆ. ಎಲ್ಲ ವ್ಯವಸ್ಥೆ ಸರಿಯಿದ್ದರೂ ಪತ್ರಿಕೆಗೆ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡುವ ಬಗ್ಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದರು.

ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮಾತನಾಡಿ, ಡಿಸಿ ಸೂಚನೆ ಮೇರೆಗೆ ಪರಿಶೀಲನೆ ನಡೆಸಿದ್ದು, ನಗರಸಭೆಯಿಂದ ಕುಡಿವ ನೀರಿಗಾಗಿ ಮಿನಿ ಆರ್‌ಒ ಪ್ಲಾಂಟ್ ವ್ಯವಸ್ಥೆ ಮಾಡಲಾಗುವುದು. ಕಲಾಭವನದಲ್ಲಿ ತಾತ್ಕಾಲಿಕ ವ್ಯವಸ್ಥೆಗಾಗಿ ತಾಪಂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸುವಂತೆ ಗ್ರಂಥಾಲಯ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು. ಪರಿಸರ ಇಂಜಿನಿಯರ್ ಚೇತನನಾಯ್ಕ, ಪ್ರಭಾರ ಎಇಇ ಶಂಕರಗೌಡ, ಜೆಇ ಶಿವಕುಮಾರ, ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಇತರರಿದ್ದರು.

ಗ್ರಂಥಾಲಯಕ್ಕೆ ಬರುವ ಕೆಲ ಓದುಗರು ಸ್ಪರ್ಧಾತ್ಮಕ ಪುಸ್ತಕಗಳನ್ನು ಹೊರಗಡೆ ಕೊಂಡೊಯ್ಯುತ್ತಿದ್ದು, ಪ್ರತಿಬಾರಿಯೂ ನಿಗಾವಹಿಸಬೇಕಿದೆ. ಸಿಸಿ ಕ್ಯಾಮರಾ ವ್ಯವಸ್ಥೆಯಿಲ್ಲದಿದ್ದರಿಂದ ಓದುಗರನ್ನು ಕಾಯುವುದೇ ದೊಡ್ಡ ಕೆಲಸವಾಗಿದೆ. ಸಂದರ್ಶನ ಪುಸ್ತಕದಲ್ಲಿ ಕೆಲವರು ಹೆಸರು ಕಲಂನಲ್ಲಿ ನಾನು, ಸ್ಥಳ ಕಲಂನಲ್ಲಿ ಅಲ್ಲಿ, ಇಲ್ಲಿ, ದೂರವಾಣಿ ಕಲಂನಲ್ಲಿ 8ಸಂಖ್ಯೆಯ ಮೊಬೈಲ್ ನಮೂದಿಸುತ್ತಿದ್ದು, ಇನ್ನೂ ಕೆಲವರು ಪುಸ್ತಕದಲ್ಲಿ ಗೀಚಿ ಹೋಗಿದ್ದಾರೆ. ಕೆಲವರಂತೂ ಬೆಳಗ್ಗೆಯಿಂದ ಸಂಜೆವರೆಗೂ ಗ್ರಂಥಾಲಯದಲ್ಲಿರುತ್ತಿದ್ದಾರೆ. ಹಿರಿಯ ನಾಗರಿಕರು ಬಂದರೂ, ಯುವಕರು ಆಸನ ಬಿಟ್ಟುಕೊಡುತ್ತಿಲ್ಲ. ಅನಿವಾರ್ಯವಾಗಿ ಮರದ ನೆರಳಿನಲ್ಲಿ ಕುಳಿತು ಪತ್ರಿಕೆ ಓದುತ್ತಿದ್ದಾರೆ. ಕೆಲವರ ಉಡಾೆ ವರ್ತನೆಯಿಂದ ಇತರರಿಗೂ ತೊಂದರೆಯಾಗುತ್ತಿದ್ದು, ಸಿಬ್ಬಂದಿಯೊಂದಿಗೆ ನಿತ್ಯವೂ ಸಂಘರ್ಷವಾಗುತ್ತಿದೆ.

ಸಂದರ್ಶನ ಪುಸ್ತಕದಲ್ಲಿ ಮಾಹಿತಿ ನೀಡದ ಓದುಗರಿಗೆ ಗ್ರಂಥಾಲಯ ಪ್ರವೇಶಿಸಲು ಅವಕಾಶವಿಲ್ಲ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಸ್ಥಳೀಯವಾಗಿ ಬಗೆಹರಿಸಲಾಗುತ್ತಿದ್ದು, ಓದುಗರ ದೂರುಗಳನ್ನು ಡಿಸಿ ಗಮನಕ್ಕೆ ತರಲಾಗುವುದು.
ಆರ್. ವಿರೂಪಾಕ್ಷಮೂರ್ತಿ ಪೌರಾಯುಕ್ತ, ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net