ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯೂ ಅಗತ್ಯ

UDP-2-1-HajiAbdulla
ಉಡುಪಿಯ ಹಾಜಿ ಅಬ್ದುಲ್ಲಾ ಅವರ ಮನೆಗೆ 'ಸ್ವಾತಂತ್ರ್ಯ ಹೋರಾಟಗಾರರ ಮನೆ' ನಾಮಫಲಕ ಅನಾವರಣ ಮಾಡಲಾಯಿತು. ಸಯ್ಯದ್​ ಸಿರಾಜ್​ ಅಹ್ಮದ್​, ಪ್ರದೀಪಕುಮಾರ್​ ಬಸ್ರೂರು, ಟಿ.ಎಂ. ಮುರುಗೇಶ್​, ನರೇಂದ್ರಕುಮಾರ್​ ಕೋಟ, ಅವಿನಾಶ್​ ಕಾಮತ್​, ಇಕ್ಬಾಲ್​ ಮನ್ನಾ ಇದ್ದರು.
Published on

ಸಯ್ಯದ್​ ಸಿರಾಜ್​ ಅಹ್ಮದ್​ ಹೇಳಿಕೆ | ಹಾಜಿ ಅಬ್ದುಲ್ಲಾ ಸಾಹೇಬ್​ ಮನೆಗೆ ಫಲಕ

ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶದ ಸ್ವಾತಂತ್ರ್ಯಕ್ಕಾಗಿ ಜಾತಿ-ಮತ ಭೇದವಿಲ್ಲದೆ ಅಪಾರ ಸಂಖ್ಯೆಯಲ್ಲಿ ನಮ್ಮ ಹಿರಿಯರು ಪ್ರಾಣತ್ಯಾಗ ಮಾಡಿದ್ದಾರೆ. ನಮ್ಮ ಊರುಗಳಲ್ಲಿಯೂ ಅನೇಕ ಸ್ವಾತಂತ್ರ್ಯ ಹೋರಾಟಗಾರರಿದ್ದು, ಅವರೆಲ್ಲರ ಸ್ಮರಣೆಯೂ ಸಹ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹಾಜಿ ಅಬ್ದುಲ್ಲಾ ಸಾಹೇಬ್​ ಮೆಮೋರಿಯಲ್​ ಟ್ರಸ್ಟ್​ನ ನಿರ್ದೇಶಕ ಸಯ್ಯದ್​ ಸಿರಾಜ್​ ಅಹ್ಮದ್​ ಅಭಿಪ್ರಾಯಪಟ್ಟರು.

ಕಾರ್ಪ್​ ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿರುವ ಉಡುಪಿಯ ಸ್ವಾತಂತ್ರ್ಯ ಹೋರಾಟಗಾರ ಹಾಜಿ ಅಬ್ದುಲ್ಲಾ ಸಾಹೇಬ್​ ಅವರ ಮನೆಯಲ್ಲಿ ಜಿಲ್ಲಾ ಕಸಾಪ ಸಹಭಾಗಿತ್ವದಲ್ಲಿ ಸ್ವರಾಜ್ಯ-75 ಸಂಘಟನೆ ಭಾನುವಾರ ಆಯೋಜಿಸಿದ್ದ ಹೊಂಬೆಳಕು (ಇದು ಸ್ವಾತಂತ್ರ್ಯದ ಹಣತೆ) ಕಾರ್ಯಕ್ರಮದಡಿ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.

UDP-2-1A-HajiAbdulla
ಅನಾವರಣಗೊಂಡ ನಾಮಫಲಕ.

ಲಕ್ಷ ರೂ. ಸಂಗ್ರಹ

ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಉಡುಪಿಗೆ ಮಹಾತ್ಮ ಗಾಂಧೀಜಿ ಬಂದಿದ್ದರು. ಆ ವೇಳೆ ಸ್ವಾಗತ ಸಮಿತಿಗೆ ಹಾಜಿ ಅಬ್ದುಲ್ಲಾ ಅವರೇ ಅಧ್ಯಕ್ಷರಾಗಿದ್ದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಅಂದಿನ ಕಾಲದಲ್ಲಿಯೇ ಒಂದು ಲಕ್ಷ ರೂ. ಸಂಗ್ರಹಿಸಿ ಗಾಂಧೀಜಿಗೆ ನೀಡಿದ್ದರು. ದೇಶಕ್ಕೆ ಹಾಗೂ ಉಡುಪಿಗೆ ಅವರ ಕೊಡುಗೆಯ ಕುರಿತು ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಅವರು ಪುಸ್ತಕ ಬರೆದಿದ್ದು, ವಿದ್ಯಾರ್ಥಿಗಳು ಓದುವಂತಾಗಬೇಕು ಎಂದರು.

ಉಡುಪಿಗೆ ಅಪಾರ ಕೊಡುಗೆ

ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಕಸಾಪದ ಕಾರ್ಯದರ್ಶಿ ನರೇಂದ್ರಕುಮಾರ್​ ಕೋಟ ಮಾತನಾಡಿ, ಸರ್ಕಾರ ಮಾಡಬೇಕಿದ್ದ ಕಾರ್ಯವನ್ನು ಈ ಸಂಘಟನೆ ಮಾಡಿರುವುದು ಹೆಮ್ಮೆಯ ವಿಚಾರ. ಉಡುಪಿಗೆ ಹಾಜಿ ಅಬ್ದುಲ್ಲಾ ಅವರ ಕೊಡುಗೆ ಅಪಾರ. ಇಂತಹ ಕಾರ್ಯಕ್ರಮಗಳಲ್ಲಿ ಶಿಕ್ಷಕರು ಪಾಲ್ಗೊಂಡರೆ ಅವರಿಗೂ ಹೆಚ್ಚಿನ ಜ್ಞಾನ ಲಭಿಸಿ, ಆ ಇತಿಹಾಸವನ್ನು ಮಕ್ಕಳಿಗೆ ವರ್ಗಾಯಿಸಲು ಸುಲಭವಾಗುತ್ತದೆ. ಜಗ ಬದಲಾವಣೆ ಆಗುತ್ತಿದ್ದರೂ ಹಳೆಯ ನೆನಪುಗಳು ಅಮರ ಎಂದರು.

ಕರಾವಳಿಗರ ಕೊಡುಗೆ ವಿಚಾರ ಸಂಕಿರಣ

ಹಾಜಿ ಅಬ್ದುಲ್ಲಾ ಸಾಹೇಬ್​ ಅವರ ಸೇವೆ ಕುರಿತು ಅವಿನಾಶ್​ ಕಾಮತ್​, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರಾವಳಿಗರ ಕೊಡುಗೆ ಕುರಿತು ಮನ್ವಿತಾ ಎಸ್​. ಮಾತನಾಡಿದರು. ಪುರಾತತ್ವ ಸಂಶೋಧಕ ಟಿ.ಎಂ. ಮುರುಗೇಶ್​ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ., ಸಮಾಜ ಸೇವಕ ಇಕ್ಬಾಲ್​ ಮನ್ನಾ, ಕಾರ್ಪ್​ ಮ್ಯೂಸಿಯಂನ ಕ್ಯೂರೇಟರ್​ ಜಯಪ್ರಕಾಶ್​ ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರದೀಪಕುಮಾರ್​ ಬಸ್ರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನವ್ಯಾ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.

ಸ್ವಾತಂತ್ರ್ಯ ಹೋರಾಟಗಾರರೆಂದರೆ ಪ್ರಮುಖ ನಾಯಕರಷ್ಟೇ ನೆನಪಾಗುತ್ತಾರೆ. ಆದರೆ, ಅವರಿಗೆ ಬೆನ್ನೆಲುಬಾಗಿ ನಿಂತಿದ್ದ ಸ್ಥಳೀಯ ಹೋರಾಟಗಾರರು ನೂರಾರು ಮಂದಿ ಇದ್ದಾರೆ. ಸ್ವಾತಂತ್ರ್ಯ ಹೋರಾಟ ಹಾಗೂ ಹೋರಾಟಗಾರರನ್ನು ಯುವ ಸಮುದಾಯಕ್ಕೆ ಪರಿಚಯಿಸಲು ನಾಮಫಲಕ ಅನಾವರಣ ಅಭಿಯಾನ ಹಮ್ಮಿಕೊಂಡಿದ್ದು, ಇದು 30ನೇ ಕಾರ್ಯಕ್ರಮವಾಗಿದೆ. ಪ್ರದೀಪಕುಮಾರ್​ ಬಸ್ರೂರು. ಸಂಚಾಲಕ, ಸ್ವರಾಜ್ಯ-75

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net