

ಮದ್ದೂರು: ತಾಲೂಕಿನ ನಂಬಿನಾಯಕನಹಳ್ಳಿ ಗ್ರಾಮದಲ್ಲಿನ ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮತ್ತು ಮಹಿಳೆಯರು ಶುಕ್ರವಾರ ಭತ್ತ ನಾಟಿ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿದರು.
ರಸ್ತೆಯನ್ನು ಸರಿಪಡಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮುಖಂಡ ಎನ್.ಕೆ.ಶ್ರೀನಿವಾಸ್ ಮಾತನಾಡಿ, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಪಟ್ಟಲದಮ್ಮ ದೇವಾಲಯವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಡಾಂಬರೀಕರಣ ಮಾಡದ ಕಾರಣ ರಸ್ತೆ ಕೆಸರು ಗದ್ದೆಯಂತಾಗಿದ್ದು, ಮಹಿಳೆಯರು, ಮಕ್ಕಳು, ವಯೋವೃದ್ಧರು ರಸ್ತೆಯಲ್ಲಿ ಸಂಚಾರ ಮಾಡಲು ಕಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಬಂತಂದೆರೆ ರಸ್ತೆ ಕೆಸರು ಗದ್ದೆಯಂತಾಗಲಿದ್ದು, ಓಡಾಡಲು ಸಾಧ್ಯವಾಗದೆ ಹಲವಾರು ಬಾರಿ ಗ್ರಾಮಸ್ಥರು ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರ ರಸ್ತೆ ಸರಿಪಡಿದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಮಹಿಳೆಯರಾದ ಶಂಕುತಲಾ, ವಸಂತ, ಶಿವಮ್ಮ, ರೇಖಾ, ಭಾಗ್ಯಾ, ದುಂಡಮ್ಮ, ಅನು, ಶಾಂತಮ್ಮ, ಮುಖಂಡರಾದ ದೇವೇಗೌಡ, ಚಿದಾನಂದ, ನಂದೀಶ್, ಋತೀಕ್ ಸೇರಿದಂತೆ ಇತರರು ಭಾಗವಹಿಸಿದ್ದರು.