

ಮಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಸಂದರ್ಭದಲ್ಲೇ ಮಂಗಳೂರು ಸಹಿತ ಭಾರತದ ಐದು ಸ್ಮಾರ್ಟ್ ಸಿಟಿ ಮತ್ತು ಮೈಸೂರು ನಗರಗಳ ಅಭಿವೃದ್ಧಿಗೆ ತಾಂತ್ರಿಕ ನೆರವು ಒದಗಿಸುವ ಒಪ್ಪಂದ ಏರ್ಪಡಲಿದೆ. ಅಮೆರಿಕದ ಆರ್ಥಿಕ ಇಲಾಖೆ ಈಗಾಗಲೇ ಈ ಬಗ್ಗೆ ಹಸಿರು ನಿಶಾನೆ ನೀಡಿದ್ದು, ಪ್ರಸ್ತಾವಿತ ನಗರಗಳ ಪ್ರಸ್ತಾವನೆ ಅನುಮೋದನೆಗೊಂಡಿದೆ.
ರಾಜ್ಕೋಟ್, ವಡೋದರಾ, ಲಖನೌ ಮತ್ತು ಪಿಂಪ್ರಿ ಚಿಂಚ್ವಾಡ್ ಮತ್ತು ಮಂಗಳೂರು ಐದು ಸ್ಮಾರ್ಟ್ ಸಿಟಿ ನಗರಗಳು ಹಾಗೂ ಸ್ಮಾರ್ಟ್ಸಿಟಿ ಅಲ್ಲದ ಮೈಸೂರು ಆಯ್ಕೆಯಾಗಿರುವ ನಗರಗಳು. ಪ್ರಸ್ತಾವಿತ ನಗರಗಳಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಗೆ ಅಗತ್ಯ ಆರ್ಥಿಕ ಸಂಪನ್ಮೂಲವನ್ನು ಮುನ್ಸಿಪಲ್ ಬಾಂಡ್ (ಒಂದು ರೀತಿಯ ಹೂಡಿಕೆ) ಮೂಲಕ ಕ್ರೋಡೀಕರಿಸಲು ಅಮೆರಿಕದ ಆರ್ಥಿಕ ಇಲಾಖೆ ಉದ್ದೇಶಿಸಿದೆ. ಅಮೆರಿಕದಲ್ಲಿ ಯಶಸ್ವಿಯಾದ ಮಾದರಿಗಳನ್ನು ಆಧರಿಸಿ ಭಾರತದ ನಗರಗಳಿಗೆ ನೆರವಾಗಲಿದೆ.
ಉತ್ತಮ ಕ್ರೆಡಿಟ್ ರೇಟಿಂಗ್ ಮತ್ತು ಸ್ಮಾರ್ಟ್ ಸಿಟಿ ಆಯ್ಕೆಗೆ ಕಳುಹಿಸಿದ ವರದಿಗಳ ಆಧಾರದಲ್ಲಿ ಈ ನಗರಗಳ ಆಯ್ಕೆ ನಡೆದಿದೆ. ಪುಣೆಯಲ್ಲಿ 2017ರಲ್ಲಿ ಪ್ರಾಯೋಗಿಕವಾಗಿ ಇದೇ ಮಾದರಿಯಲ್ಲಿ 200 ಕೋಟಿ ರೂ. ಕ್ರೋಡೀಕರಿಸಿ ನೀರಿನ ಪೂರೈಕೆ ವ್ಯವಸ್ಥೆ ಮಾಡಲಾಗಿತ್ತು. ಭಾರತದಲ್ಲಿ ನೀತಿ ಆಯೋಗ ಮತ್ತು ವಿತ್ತ ಸಚಿವಾಲಯದ ಪರಿಶೀಲನೆ ಬಳಿಕ ಪರಿಗಣಿಸಲ್ಪಟ್ಟ 13 ನಗರಗಳ ಹೆಸರುಗಳಲ್ಲಿ ಈ ಅವಧಿಯಲ್ಲಿ ಆರು ನಗರಗಳ ಹೆಸರು ಅಂತಿಮಗೊಳಿಸಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಮೆರಿಕದ ಆರ್ಥಿಕ ಇಲಾಖೆ ಮತ್ತು ಭಾರತದ ಸ್ಮಾರ್ಟ್ ಸಿಟಿ ನಡುವೆ ಒಡಂಬಡಿಕೆ ನಡೆಯಲಿದೆ.