ನಾಮಧಾರಿ ಸಭಾಭವನದ ವೆಂಕಟರಮಣ ದೇವರ ವರ್ಧಂತಿ ಉತ್ಸವ ಸಂಪನ್ನ

Namadhari.
Published on

ಕುಮಟಾ: ಪಟ್ಟಣದ ನಾಮಧಾರಿ ಸಭಾಭವನದ ಆವರಣದಲ್ಲಿರುವ ಶ್ರೀವೆಂಕಟರಮಣ, ಶ್ರೀದೇವಿ ಮತ್ತು ಭೂದೇವಿ ದೇವಸ್ಥಾನದಲ್ಲಿ ಮೇ 11ರಿಂದ ಮೇ 13 ರವರೆಗೆ ಹಮ್ಮಿಕೊಂಡಿದ್ದ ವರ್ಧಂತಿ ಉತ್ಸವ, ದೇವರಿಗೆ ಬೆಳ್ಳಿ ಕವಚ ಸಮರ್ಪಣೆ, ಜೀರ್ಣಾಷ್ಠಬಂಧ ಮತ್ತು ಬ್ರಹ್ಮಕಲಶಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ತಾಲೂಕು ನಾಮಧಾರಿ ಆರ್ಯ ಈಡಿಗ ನಾಮಧಾರಿ ಸಮಾಜ ಸಂಘಟನೆಯ ಮುಂದಾಳತ್ವದಲ್ಲಿ ಸೋಮವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಉಜಿರೆ ಶ್ರೀರಾಮ ಕ್ಷೇತ್ರದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಶ್ರೀದೇವರಿಗೆ ಬೆಳ್ಳಿ ಕವಚ ಸಮರ್ಪಣೆ ಮಾಡಿ, ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬರೂ ಸುಖವನ್ನೇ ಅರಸುತ್ತಾರೆ. ಆದರೆ ಹಾಗೆಲ್ಲಾ ಎಲ್ಲರಿಗೂ ಸುಖಪ್ರಾಪ್ತಿಯಿಲ್ಲ. ಧರ್ಮದ ಅಂತರಾಳದಲ್ಲಿ ಸುಖ ಇದೆ. ಅದನ್ನು ಪಡೆಯಲು ಅವಿದ್ಯೆ, ಅಹಂ, ರಾಗ, ದ್ವೇಷ, ಕೋಪತಾಪಗಳನ್ನು ಬಿಟ್ಟು ಬಿಟ್ಟು ಭಗವಂತನ ದರ್ಶನಕ್ಕೆ ಯೋಗಿಯಾಗಬೇಕು. ಗುರುವಿನ ಮಾರ್ಗದರ್ಶನದಲ್ಲಿ ದೇವರ ಸಾಕ್ಷಾತ್ಕಾರ, ಅನುಗ್ರಹ ಸುಲಭ ಸಾಧ್ಯವಿದೆ ಎಂದರು.
ಯಾವುದೇ ಸಮಾಜ ತಾನು ಬೆಳೆಯುತ್ತಿದ್ದಂತೆ ಇತರ ಸಮಾಜಗಳಿಗೂ ಬೆಳೆಯುವಲ್ಲಿ ಸಹಯೋಗ ನೀಡಿದರೆ ಸಮಾಜದಲ್ಲಿ ಸಾಮರಸ್ಯ ಸಾರಿದಂತಾಗುತ್ತದೆ. ಸಮಾಜವನ್ನು ಒಗ್ಗೂಡಿಸುವ ಕಾರ್ಯದಲ್ಲಿ ಸಂಘಟನೆಗಳೊಟ್ಟಿಗೆ ಸಕ್ರಿಯರಾಗಿರಬೇಕು ಎಂದು ಶ್ರೀಗಳು ಕರೆ ನೀಡಿದರು. ಪ್ರಾಸ್ತಾವಿಕ ಮಾತನಾಡಿದ ವಕೀಲ ಆರ್.ಜಿ.ನಾಯ್ಕ, ಸಮಾಜದ ಸಂಘಟನೆಯಲ್ಲಿ ಕೊರತೆ ಕಾಣುತ್ತಿದೆ. ಯುವ ಸಮುದಾಯ ಸಂಘಟನೆಯ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕು. ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿ ಸಮಾಜ ಬಲಪಡಿಸಬೇಕು ಎಂದರು.
ಶ್ರೀಗಳ ಪಾದ ಪೂಜೆ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ನಮ್ಮ ಸಮಾಜದಲ್ಲಿ ಸಂಘಟನಾತ್ಮಕ ಭಾವ ವ್ಯಾಪಕವಾಗಿ ಬೆಳೆದಿಲ್ಲ. ಸಭಾಭವನದ ಮೇಲಿನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ದಿ. ಡಾ.ಎಂ.ಡಿ.ನಾಯ್ಕರ ಪುತ್ಥಳಿ ನಿರ್ಮಿಸುವ ಚಿಂತನೆ ನಡೆದಿದೆ. ಈ ಎಲ್ಲ ಕಾರ್ಯಕ್ಕೆ ಸಮಾಜ ಬಾಂಧವರು ಸಹಕಾರ ನೀಡಬೇಕು ಎಂದರು.
ಅರ್ಚಕ ವಿಷ್ಣುಮೂರ್ತಿ ಭಟ್, ಕೆಲಸಗಾರ ಮಾಸ್ತಿ ಗೌಡ, ಕಟ್ಟಡ ಕಾಮಗಾರಿ ಉಸ್ತುವಾರಿ ಗಣೇಶ ನಾಯ್ಕರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ಪ್ರಮೋದ ನಾಯ್ಕ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net