ಜನಪರ ಆಡಳಿತಕ್ಕೆ ನಾಲ್ವಡಿಯೇ ಮಾದರಿ

Nalwadi (1)
Published on

ನಾಡುಕಂಡ ಅಪರೂಪದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಆಡಳಿತಾವಧಿಯಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಇಂಬು-ವೇಗೋತ್ಕರ್ಷ ದೊರೆಯಿತು. ಅವರ 140ನೇ ಜಯಂತಿ ಹಿನ್ನೆಲೆಯಲ್ಲಿ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಾಲ್ವಡಿಯವರ ವ್ಯಕ್ತಿತ್ವ, ಸಮಾಜಮುಖಿ ಚಿಂತನೆ ಹಾಗೂ ಸಾಧನೆಗಳನ್ನು ತೆರೆದಿಟ್ಟಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅರಮನೆಯಲ್ಲಿ ಕಾಲ ಕಳೆದಿದ್ದಕಿಂತ ಹೆಚ್ಚಾಗಿ ಜನರೊಂದಿಗೆ ಕಾಲ ಕಳೆದಿದ್ದೇ ಹೆಚ್ಚು. ಅವರು ಸದಾ ಸಮಾಜಮುಖಿ ಆಲೋಚನೆ ಹೊಂದಿದ್ದರು. ಸಮಾಜಕೋಸ್ಕರ ಏನಾದರು ಮಾಡಬೇಕು ಎಂಬ ತುಡಿತ ಅವರಲ್ಲಿ ಸದಾ ಇತ್ತು. ಈ ತುಡಿತವೇ ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಕಾರಣವಾಯಿತು. ಒಂದು ಜನಪರವಾದ, ಮಾದರಿಯಾದ ಆಡಳಿತ ಹೇಗಿರಬೇಕು ಎಂಬುದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಮಾದರಿ

ಒಂದು ಬಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದ ಸಂದರ್ಭ ಮಾರ್ಗದ ಮಧ್ಯೆ ಮಹಿಳೆಯೊಬ್ಬರು ಆಗಮಿಸಿ ‘ಕೊಲೆ ಅಪರಾಧಿಯಾಗಿರುವ ನನ್ನ ಮಗನಿಗೆ ಮರಣ ದಂಡನೆಯಾಗಿದ್ದು, ದಯವಿಟ್ಟು ತಾವು ದಯೆ ತೋರಿ ಮರಣ ದಂಡನೆಯನ್ನು ರದ್ದು ಪಡಿಸಬೇಕು’ ಎಂದು ಮನವಿ ಮಾಡಿಕೊಳ್ಳುತ್ತಾರೆ. ಈ ಸಂದರ್ಭ ಆ ಮಹಿಳೆಗೆ ನಾಲ್ವಡಿ ಅವರು ಸಾಂತ್ವನ ಹೇಳಿ, ‘ನಿನ್ನ ಮಗನನ್ನು ನಾನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಬಹುದು. ಆದರೆ, ಮಗನನ್ನು ಕಳೆದುಕೊಂಡ ತಾಯಿಗೆ ನಾನು ಏನು ಉತ್ತರ ಹೇಳಲಿ?’ ಎಂದು ಪ್ರಶ್ನಿಸಿ ಮರಣದಂಡನೆ ಆದೇಶ ಹಿಂಪಡೆಯಲು ನಿರಾಕರಿಸಿ ಮುನ್ನಡೆಯುತ್ತಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್
ನಾಲ್ವಡಿ ಕೃಷ್ಣರಾಜ ಒಡೆಯರ್

ನಾಲ್ವಡಿ ಕೃಷ್ಣರಾಜ ಒಡೆಯರ್ ಒಮ್ಮೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಬಿಡದಿಯ ಬಳಿ ರೈಲ್ವೆ ಲೆವಲ್ ಕ್ರಾಸಿಂಗ್‌ನಲ್ಲಿ ಗೇಟ್ ಬಂದ್ ಆಗಿರುತ್ತದೆ. ಕಾರಿನಲ್ಲಿ ಮಹಾರಾಜರು ಇರುವ ವಿಷಯವನ್ನು ರೈಲ್ವೆ ಗೇಟ್ ಸಿಬ್ಬಂದಿಗೆ ತಿಳಿಸಿದರೂ ಆತ ಗೇಟ್ ತೆರೆಯಲು ಮುಂದಾ ಗಲಿಲ್ಲ. ರೈಲು ಹಾದು ಹೋದ ನಂತರವಷ್ಟೇ ಆತ ಗೇಟ್ ತೆರೆದು ಮಹಾರಾಜರ ಕಾರು ಮುಂದೆ ಸಾಗಲು ಅನುವು ಮಾಡಿಕೊಟ್ಟ. ಆದರೆ, ಇದರಿಂದ ನಾಲ್ವಡಿ ಅವರು ಕೋಪಗೊಳ್ಳಲಿಲ್ಲ. ಬದಲಾಗಿ ಆತನ ಕಾರ್ಯದಕ್ಷತೆ ಮೆಚ್ಚಿ ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಈ ಎರಡು ಘಟನೆಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಷ್ಟೊಂದು ಸರಳ, ಜನಪರ ಹಾಗೂ ನ್ಯಾಯಪರವಾಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ.

ಅಭಿವೃದ್ಧಿಯ ಕಲ್ಪನೆ ಮೈಸೂರು ಸಂಸ್ಥಾನದಲ್ಲಿ ಮೊದಲಿನಿಂದಲೂ ಇತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅದಕ್ಕೆ ವೇಗ ದೊರೆಯಿತು. ನಾಲ್ವಡಿ ಅವರ ಜತೆಗೆ ದಿವಾನರು ಸೇರಿದಂತೆ ಪ್ರತಿಯೊಬ್ಬರಲ್ಲೂ ಅಭಿವೃದ್ಧಿಯ ಮುನ್ನೋಟ ಇತ್ತು. ಮೈಸೂರು ಸಂಸ್ಥಾನದ ಜನರು ನಾಲ್ವಡಿ ಅವರ ಕನಸುಗಳನ್ನು ಸಾಕಾರಗೊಳಿಸಲು ದುಡಿದರು. ಈ ಎಲ್ಲ ಕಾರಣಕ್ಕಾಗಿ ಮೈಸೂರು ಸಂಸ್ಥಾನ ಇಷ್ಟೊಂದು ಅಭಿವೃದ್ಧಿ ಕಾಣಲು ಸಾಧ್ಯವಾಯಿತು. ಸಣ್ಣ ವಯಸ್ಸಿನಲ್ಲಿಯೇ ಅವರು ಇಹಲೋಕ ತ್ಯಜಿಸಿದರು. ಅವರು ಬಹುದೊಡ್ಡ ಅಭಿವೃದ್ಧಿಯ ಕನಸುಗಾರ. ಅವರು ಕೈ ಹಾಕದ ಕ್ಷೇತ್ರವೇ ಇಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಅವರ ಕೊಡುಗೆ ಇದೆ. ಹಾಗಾಗಿ ಅವರ ಎಲ್ಲ ಕನಸುಗಳು ಸಾಕಾರಗೊಂ ಡಿವೆ ಎಂಬ ಅಭಿಪ್ರಾಯ ಮೇಲ್ನೋಟಕ್ಕೆ ಮೂಡುವುದು ಸಹಜ. ಆದರೆ, ಅವರಲ್ಲಿ ಮತ್ತಷ್ಟು ಕನಸುಗಳು ಇದ್ದಿರಲೂ ಬಹುದು. ಅವರಿಗೆ ದೇವರು ಮತ್ತಷ್ಟು ಆಯಸ್ಸು ನೀಡಿದ್ದರೆ ಮೈಸೂರು ಸಂಸ್ಥಾನದಲ್ಲಿ ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ಕಾಣುತಿತ್ತು.

ಆಡಳಿತದಲ್ಲಿ ಜನರ ಸಹಭಾಗಿತ್ವ ಇರಬೇಕು ಎಂಬ ಉದ್ದೇಶದಿಂದ ಮೈಸೂರು ಸಂಸ್ಥಾನದಲ್ಲಿ ಚಾಮರಾಜ ಒಡೆಯರ್ ಕಾಲದಲ್ಲಿ ಪ್ರಜಾಪ್ರತಿನಿಧಿ ಸಭೆ ಪ್ರಾರಂಭಗೊಂಡಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಇದು ವಿಸ್ತಾರವಾಗಿ ಬೆಳೆಯಿತು. ನಾಲ್ವಡಿ ಕಾಲದಲ್ಲಿ ಈ ಸಭೆಯಲ್ಲಿ 240 ಸದಸ್ಯರು ಇದ್ದರು ಹಾಗೂ 5 ಸಚಿವರು ಇದ್ದರು. ಈ ಸಭೆಯ ಮೂಲಕ ನಾಲ್ವಡಿ ಅವರು ಸಂಸ್ಥಾನದ ಅಭಿವೃದ್ಧಿಗೆ ಹಲವಾರು ಸಲಹೆಗಳನ್ನು ಪಡೆಯುತ್ತಿದ್ದರು. ಈ ಸಭೆಯಲ್ಲಿ ದೊರೆತ ಹಲವಾರು ಸಲಹೆಗಳು ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಕಾರಣವಾಯಿತು.

ಶಿಕ್ಷಣ ಇಲ್ಲದೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನಾಲ್ವಡಿ ಅವರು ಕಂಡುಕೊಂಡಿದ್ದರು. ಈ ಕಾರಣಕ್ಕಾಗಿಯೇ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅವರು ಹೆಚ್ಚಿನ ಒತ್ತು ನೀಡಿದರು. ಮಾತ್ರವಲ್ಲ, ಪ್ರತಿಯೊಬ್ಬರಿಗೂ ಶಿಕ್ಷಣ ಉಚಿತವಾಗಿ ದೊರೆಯುವಂತೆ ಮಾಡಿದರು. ಶಿಕ್ಷಣದಿಂದ ನನಗೆ ಇಷ್ಟೊಂದು ಶ್ರೇಯಸ್ಸು ದೊರೆತ್ತಿದೆ. ಈ ಶ್ರೇಯಸ್ಸು ಸಮಾಜಕ್ಕೂ ದೊರೆಯಬೇಕು ಎಂಬ ಉದ್ದೇಶದಿಂದಲೇ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದರು. ಶಿಕ್ಷಣದ ಜತೆಗೆ ಕೃಷಿ, ಕೈಗಾರಿಕೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಿದರು. ಇದರಿಂದ ಮೈಸೂರು ಸಂಸ್ಥಾನ ಮಾದರಿ ಸಂಸ್ಥಾನವಾಗಿ ರೂಪುಗೊಂಡಿತು. ಈ ಮಾದರಿ ಆಡಳಿತವನ್ನು ಕಂಡು ಗಾಂಧೀಜಿ ನಾಲ್ವಡಿ ಅವರಿಗೆ ‘ರಾಜರ್ಷಿ’ ಬಿರುದ್ದು ನೀಡಿದರು.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ನಾಲ್ವಡಿ ಕೃಷ್ಣರಾಜ ಒಡೆಯರ್ ಎಲ್ಲ ಕ್ಷೇತ್ರಗಳಿಗೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆ ಕೊಡುಗೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಸರ್ಕಾರ ಹಾಗೂ ಜನರು ಮಾಡಬೇಕು. ಅವರು ಕಟ್ಟಿದಂತಹ ಅನೇಕ ಸಂಸ್ಥೆಗಳು ಇದ್ದು, ಅವುಗಳ ಉನ್ನತಿಗೆ ಯೋಜನೆಗಳನ್ನು ರೂಪಿಸಬೇಕು. ಅದೇ ರೀತಿ ನಗರದಲ್ಲಿ ಸಾಕಷ್ಟು ಪಾರಂಪರಿಕ ಕಟ್ಟಡಗಳು ಇದ್ದು, ಅವುಗಳನ್ನು ಉಳಿಸಬೇಕು. ಇದುವೇ ನಾವು ನಾಲ್ವಡಿ ಅವರಿಗೆ ಕೊಡಬಹುದಾದ ಬಹುದೊಡ್ಡ ಕೊಡುಗೆಯಾಗಿದೆ. ಇದೀಗ ನಗರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬೃಹತ್ ಪ್ರತಿಮೆ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಜನರಿಂದ ಕೇಳಿ ಬರುತ್ತಿದೆ. ಪ್ರತಿಮೆ ನಿರ್ಮಾಣ ಸ್ವಾಗತಾರ್ಹ, ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ. ಹಲವಾರು ಜನರು ಅದರಿಂದ ಉತ್ತಮ ಬದುಕು ರೂಪಿಸಿಕೊಳ್ಳಬಹುದು. ಆದರೆ ಇದಕ್ಕಿಂತ ಮುಖ್ಯವಾಗಿ ನಾಲ್ವಡಿ ಅವರು ಕಟ್ಟಿದಂತಹ ಸಂಸ್ಥೆಗಳು, ಪಾರಂಪರಿಕ ಕಟ್ಟಡಗಳ ತುರ್ತು ಅನಿವಾರ್ಯತೆ ಇದೆ. ನಾಲ್ವಡಿ ಅವರು ಪ್ರತಿಮೆ ನಿರ್ಮಾಣಕ್ಕೆ ಆದ್ಯತೆ ನೀಡಿದವರಲ್ಲ. ಅವರು ಇದ್ದ ಹಣವನ್ನೆಲ್ಲ ಅಭಿವೃದ್ಧಿಗೆ ವಿನಿಯೋಗಿಸಿದರು. ಹಾಗಾಗಿ ಪ್ರತಿಮೆ ನಿರ್ಮಾಣ ಮಾಡುವ ಹಣವನ್ನು ನಾಲ್ವಡಿ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ ನಿರ್ಮಾಣ ಮಾಡುವುದು ಸೂಕ್ತ.

ಇತಿಹಾಸ ಪುಟಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಿಗಬೇಕಾದಷ್ಟು ಸ್ಥಾನಗಳು ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಜನರ ಹೃದಯದಲ್ಲಿ ಅವರಿಗೆ ಬಹುದೊಡ್ಡ ಸ್ಥಾನವೇ ಸಿಕ್ಕಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಬೇಕು ಎಂದು ನಾವು ಒತ್ತಾಯ ಮಾಡಲಿಲ್ಲ. ಆದರೆ, ನಾಲ್ವಡಿ ಹೆಸರು ಇಡಬೇಕು ಎಂದು ಜನರೇ ಒತ್ತಾಯಿಸಿದರು. ಇದು ಜನರ ಮನದಲ್ಲಿ ನಾಲ್ವಡಿ ಅವರು ಚಿರಸ್ಥಾಯಿ ಆಗಿರುವುದಕ್ಕೆ ಸಾಕ್ಷಿಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ನಮ್ಮ ಮೈಸೂರು ಸಂಸ್ಥಾನ ಹಾಗೂ ರಾಜಮನೆತನದ ಗೌರವ ಮತ್ತಷ್ಟು ಹೆಚ್ಚಾಯಿತು. ಹೀಗಾಗಿ ಪ್ರತಿಯೊಂದು ಸಂದರ್ಭದಲ್ಲೂ ನಾವು ಅವರನ್ನು ನೆನಸಿಕೊಂಡೇ ಮುಂದಿನ ಹೆಜ್ಜೆ ಇಡುತ್ತೇವೆ.

ಇಂದು ರಾಜ್ಯ ಇಷ್ಟೊಂದು ಅಭಿವೃದ್ಧಿ ಹೊಂದಲು ನಾಲ್ವಡಿ ಕೃಷ್ಣರಾಜ ಒಡೆಯರ್ ನೆಟ್ಟಿರುವ ಬೀಜವೇ ಕಾರಣ ಎಂದು ಜನರೇ ಹೇಳುತ್ತಾರೆ. ನಾನು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿ ಸಂದರ್ಭದಲ್ಲಿ ಅಲ್ಲಿನ ಜನರು ತುಂಬಾ ಪ್ರೀತಿ ತೋರುತ್ತಾರೆ. ನಮ್ಮ ಉತ್ತರ ಕರ್ನಾಟಕ ಮೈಸೂರು ಸಂಸ್ಥಾನಕ್ಕೆ ಸೇರಿದಿದ್ದರೆ ಒಳ್ಳೆಯದಾಗುತಿತ್ತು ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಜನರು ನಮ್ಮ ಮೇಲೆ ತೋರುವ ಈ ಪ್ರೀತಿಗೆ ನಾಲ್ವಡಿ ಅವರ ಕೊಡುಗೆ ಅಪಾರವಾದದ್ದು.
ನಿರೂಪಣೆ: ಸದೇಶ್ ಕಾರ್ಮಾಡ್, ಚಿತ್ರಗಳು: ಕೆ.ಎಚ್. ಚಂದ್ರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net