

ಮಂಡ್ಯ: ಇಡೀ ಜಗತ್ತೇ ಮೈಸೂರು ರಾಜ್ಯದ ಕಡೆಗೆ ಮುಖ ಮಾಡುವಂತೆ ಮಾಡಿದ ಕೀರ್ತಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಮೈಸೂರು ಪ್ರಾಂತ್ಯ ಆಡಳಿತದ ಅವಧಿಯಲ್ಲಿ ಆಧುನಿಕತೆಯ ಸುವರ್ಣ ಯುಗ ಎಂದರೂ ತಪ್ಪಾಗದು. ಮಾತ್ರವಲ್ಲದೆ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಚಿಸಿದ ಮಹಾನ್ ವ್ಯಕ್ತಿತ್ವ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜ ವಿ.ಭೈರಿ ಹೇಳಿದರು.
ನಗರದ ರೆಡ್‌ಕ್ರಾಸ್ ಭವನದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್, ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರು.
ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಶಿಕ್ಷಣ ಮತ್ತು ನೀರಾವರಿ, ವಿಜ್ಞಾನ, ಕೈಗಾರಿಕೆ, ಮಹಿಳಾ ಶಿಕ್ಷಣ, ಸಾಹಿತ್ಯ, ರಾಜಕೀಯ, ಹಿಂದುಳಿದ ಹಾಗೂ ಬಡ ಜನರ ಬಗ್ಗೆ ಸಂವೇದನಾಶೀಲರಾಗಿ ಚಿಂತಿಸಿ ಪ್ರಗತಿಪರ ನಿರ್ಧಾರಗಳನ್ನು ಕೈಗೊಂಡು ಇತಿಹಾಸದಲ್ಲಿ ಮರೆಯಲಾಗದ ಮಹಾರಾಜರಾಗಿದ್ದಾರೆ. ಸ್ವಾತಂತ್ರ್ಯ ಬಂದ ಮೇಲೆ ಪ್ರಜಾಪ್ರಭುತ್ವ ಹೇಗಿರಬೇಕು ಎಂಬುದನ್ನು ದೇಶಕ್ಕೆ ತಿಳಿಸಿಕೊಟ್ಟವರು. ಜನಪರ ಕೆಲಸಗಳನ್ನು ಮಾಡಿ ತೋರಿಸಿಕೊಟ್ಟಿದ್ದಾರೆ. ಅವರ ದಾರಿಯಲ್ಲಿ ಇಂದಿನ ರಾಜಕಾರಣಿಗಳು ನಡೆದುಕೊಂಡರೆ ಸಾಕು ಎಂದು ಸಲಹೆ ನೀಡಿದರು.
ಅಲಯನ್ಸ್ ಸಂಸ್ಥೆ ಜಿಲ್ಲಾ ಗವರ್ನರ್ ಕೆ.ಟಿ.ಹನುಮಂತು ಮಾತನಾಡಿ, ಹತ್ತಾರು ವರ್ಷಗಳ ಬಹುಬೇಡಿಕೆ ಜಿಲ್ಲಾಧಿಕಾರಿ ಕಚೇರಿ ಬಳಿ ನಾಲ್ವಡಿ ಅವರ ಪ್ರತಿಮೆ ನಿರ್ಮಾಣವಾಗಬೇಕು. ಆದರೆ ಇನ್ನೂ ಆಗಿಲ್ಲ. ಸುಮಾರು 2 ಕೋಟಿ ರೂ ಇದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕಾರ್ಯರೂಪಕ್ಕೆ ತರುವಂತೆ ಎಲ್ಲರೂ ಒತ್ತಾಯಿಸಿಸೋಣ ಎಂದ ಅವರು, ಸೇವಾಕ್ಷೇತ್ರದಲ್ಲಿ ಸೇವಾಕಿರಣ ಟ್ರಸ್ಟ್‌ನ ಕಾರ್ಯದಶಿ ಜಿ.ವಿ.ನಾಗರಾಜು ಅವರ ಪಾತ್ರ ಅಪಾರವಿದೆ. ಸಂಘಟನೆ, ಸೇವೆ, ಸಾಹಿತ್ಯ, ನಿರಾಶ್ರಿತರಿಗೆ ಆಸರೆಯಾಗುವುದು ಅವರ ಪ್ರಮುಖ ಧ್ಯೇಯ. ಇಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ 4ನೇ ವರ್ಷದ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸುತ್ತಿದ್ದೇವೆ ಎಂದರು.
ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವಾನಂದ, ಅಲಯನ್ಸ್ ಸಂಸ್ಥೆಯ 1ನೇ ಉಪ ಗವರ್ನರ್ ಎಚ್.ಮಾದೇಗೌಡ, 2ನೇ ಉಪ ಗವರ್ನರ್ ಕೆ.ಆರ್.ಶಶಿಧರ ಈಚೆಗೆರೆ, ಜಿಲ್ಲಾ ರಾಯಭಾರಿ ಮಂಜುನಾಥ್, ನೀನಾ ಪಟೇಲ್, ಜಲಜಾಕ್ಷಿ, ಆರ್.ಮಹೇಶ್, ಎಂ.ಲೋಕೇಶ್, ಪ್ರಮೀಳಾ, ಮಹಾಲಕ್ಷ್ಮೀ, ನಾರಾಯಣಸ್ವಾಮಿ ಇತರರಿದ್ದರು.
ಇದೇ ಸಂದರ್ಭದಲ್ಲಿ ಸೇವಾಕಿರಣ ವೃದ್ಧಾಶ್ರಮದ ಕಾರ್ಯದರ್ಶಿ ಜಿ.ವಿ.ನಾಗರಾಜು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬಳಿಕ ಗೀತಗಾಯನ ನಡೆಯಿತು.