

ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ಅರಮನೆ ದಕ್ಷಿಣ ದ್ವಾರ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಪ್ರಯುಕ್ತ ಅರಮನೆಗೆ ಆಗಮಿಸಿದ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಣೆ ಮಾಡಲಾಯಿತು.
ಈ ಸಂದರ್ಭ ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಮೈಸೂರನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಮಹಾನ್ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್. ನಾಲ್ವಡಿ ಅವರು ಕೊಡುಗೆ ನೀಡದ ಕ್ಷೇತ್ರಗಳೇ ಇಲ್ಲ. ಕೃಷಿ, ಕೈಗಾರಿಕೆ, ನೀರಾವರಿ, ಜಲ ವಿದ್ಯುತ್, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅವರು ಕೊಡುಗೆ ನೀಡಿದ್ದಾರೆ ಎಂದರು.
ಮೈಸೂರು ಮತ್ತು ಬೆಂಗಳೂರನ್ನು ಆಕರ್ಷಣೀಯ ಕೇಂದ್ರವಾಗುವಂತೆ ಮಾಡಿದ್ದು ನಾಲ್ವಡಿಯವರು. ಬಾಲಕನಾಗಿರುವಾಗಲೇ ಸಿಂಹಾಸನ ಏರಿದ ನಾಲ್ವಡಿ ಅವರು ಪ್ರಜಾಪ್ರತಿನಿಧಿ ಸಭೆ ಜಾರಿಗೆ ತಂದರು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪಿಸಿದರು. ಈ ರೀತಿ ಅವರು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ನಾಲ್ವಡಿ ಅವರು ರಾಜ್ಯದ ನಾನಾ ಭಾಗಗಳಲ್ಲಿ 270ಕ್ಕೂ ಹೆಚ್ಚು ಉಚಿತ ಆಸ್ಪತ್ರೆಗಳನ್ನು ಪ್ರಾರಂಭಿಸಿದರು. ಜತೆಗೆ ಮೈಸೂರು, ಬೆಂಗಳೂರು ನಗರಗಳಲ್ಲಿ ವಿಶಾಲವಾದ ರಸ್ತೆಗಳು, ವಿದ್ಯುತ್ ದೀಪಗಳು, ಉದ್ಯಾನಗಳು, ಶ್ರೇಷ್ಠ ವಿದ್ಯಾಸಂಸ್ಥೆಗಳು, ಅನಾಥಾಲಯಗಳನ್ನು ನಿರ್ಮಾಣ ಮಾಡಿದರು. ನಾಲ್ವಡಿ ಅವರ ಆಡಳಿತ ಅವಧಿಯ ವರ್ಷಗಳನ್ನು ಮೈಸೂರಿನ ಸುವರ್ಣ ಯುಗ ಎಂದರೆ ತಪ್ಪಾಗಲಾರದು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಜರಾಮರವಾಗಿ ಉಳಿದಿದ್ದಾರೆ. ಕನ್ನಡಿಗರು ಬೆಳಗೆದ್ದು ನೆನೆಯಲೇಬೇಕಾದ ಮಹನೀಯರಲ್ಲಿ, ಪ್ರಾಂತ ಸ್ಮರಣೀಯರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಿಗರು. ಆಧುನಿಕ ಮೈಸೂರು ನಿರ್ಮಾಣ, ಅಭಿವೃದ್ಧಿಗೆ ನಾಲ್ವಡಿ ಕೊಡುಗೆ ಅಪಾರ. ಕೇಂದ್ರ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಉದ್ಯಮಿ ಎ.ಪಿ.ನಾಗೇಶ್, ಅನ್ವೇಷಣಾ ಟ್ರಸ್ಟ್ ಅಧ್ಯಕ್ಷ ಅಮರನಾಥ ರಾಜೇ ಅರಸ್, ಕಾಂಗ್ರೆಸ್ ಮುಖಂಡ ನಜರಬಾದ್ ನಟರಾಜ್, ಸುರೇಶ್ ಗೋಲ್ಡ್, ಡಾ.ಶಾಂತರಾಜೇ ಅರಸ್, ಪ್ರಭುಶಂಕರ, ಸಿ.ಎಚ್. ಕೃಷ್ಣಯ್ಯ, ಪ್ರಭಾಕರ, ನೇಹಾ ಹಾಗೂ ಇತರರು ಇದ್ದರು.