

ಮಂಡ್ಯ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಧುನಿಕ ಕನ್ನಡ ನಾಡಿನ ನಿರ್ಮಾತೃ. ಶಿಕ್ಷಣ, ಆರೋಗ್ಯ, ನೀರಾವರಿ, ಸಾಮಾಜಿಕ ನ್ಯಾಯ, ಕೈಗಾರಿಕೆ ಸೇರಿದಂತೆ ನಾಡಿನ ಸರ್ವಾಂಗೀಣ ಪ್ರಗತಿಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಕನ್ನಡಿಗರ ಪಾಲಿಗೆ ಸದಾ ಪ್ರಾತಃಸ್ಮರಣೀಯರು ಎಂದು ಜಿಲ್ಲಾ ಅರಸು ಸಂಘದ ಅಧ್ಯಕ್ಷ ಪುಟ್ಟಬುದ್ಧಿರಾಜೇಅರಸ್ ಹೇಳಿದರು.
ಇಲ್ಲಿನ ಸುಭಾಷ್‌ನಗರದಲ್ಲಿರುವ ಜಿಲ್ಲಾ ಅರಸು ಸಂಘದಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಕರುನಾಡಿನ ಭಾಗ್ಯವಿಧಾತರಾದ ನಾಲ್ವಡಿ ಅವರು ಭಾರತದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ತಂದರು. ಮಹಾತ್ಮ ಗಾಂಧೀಜಿ ಮತ್ತು ಪ್ರಜೆಗಳಿಂದ ರಾಜರ್ಷಿ ಬಿರುದು ಪಡೆದಿದ್ದ ಅವರು ಪ್ರಜೆಗಳ ನೆಮ್ಮದಿಯ ಬದುಕಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಸ್ಮರಿಸಿದರು.
ಅರಸು ಸಂಘದ ಉಪಾಧ್ಯಕ್ಷ ಮಾದರಾಜೇ ಅರಸ್, ನಂಜರಾಜೇ ಅರಸ್, ಕಾರ್ಯದರ್ಶಿ ದೇವರಾಜೇ ಅರಸ್, ಖಜಾಂಜಿ ಬಸವರಾಜೇ ಅರಸ್, ರಾಮರಾಜೇ ಅರಸ್, ಲಿಂಗರಾಜೇ ಅರಸ್, ರಜಿನಿ ಅರಸ್, ದೇವೇರಮ್ಮಣಿ, ಬಸವರಾಜಮ್ಮಣಿ, ಉಮಾ, ಗೌರಮ್ಮಣ್ಣಿ, ಸರೋಜಾ, ಹೊಸಹಳ್ಳಿ ಶಿವು, ಶಿವಕುಮಾರ್ ಕೆಂಪಯ್ಯ ಇತರರಿದ್ದರು.