ನಾಲ್ವಡಿ ಸಾಮಾಜಿಕ ನ್ಯಾಯದ ನಿರ್ಮಾತೃ: ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣನೆ

Nalvadi Krishnaraja Wodeyar Jayanti Mandya
Published on

ಮಂಡ್ಯ: ಸಮಸಮಾಜದ ಕನಸು ಹೊತ್ತು ಹಿಂದುಳಿದ ವರ್ಗಗಳ ಆಯೋಗ ರಚಿಸುವುದರ ಜತೆಗೆ ಮೀಸಲಾತಿ ಜಾರಿಗೆ ತಂದ ಸಮ ಸಮಾಜ ಹಾಗೂ ಸಾಮಾಜಿಕ ನ್ಯಾಯದ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಇಂದು ನಮ್ಮೊಡನೆ ಇಲ್ಲದಿದ್ದರೂ ಅವರು ನಮ್ಮ ಮುಂದಿನ ಪೀಳಿಗೆಗೂ ಅವರನ್ನು ಸ್ಮರಿಸುವಂತಹ ಕೊಡುಗೆ ನೀಡಿದ್ದಾರೆ. ನಮ್ಮ ಭಾಗದ ಜನರು ಪ್ರತಿನಿತ್ಯ ಅವರನ್ನು ನೆನೆಯುವಂತಹ ಸೇವೆ ಸಲ್ಲಿಸಿದ್ದಾರೆ ಎಂದರು.

ಮೈಸೂರು, ಮಂಡ್ಯ, ಹಾಸನ ಪ್ರಾಂತ್ಯಗಳ ಜನರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರವನ್ನು ಮನೆಗಳಲ್ಲಿ ಇರಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಭಾಗದ ಜನರು ನಾಡಗೀತೆಗೆ ನೀಡುವಷ್ಟೇ ಗೌರವವನ್ನು ಮರೆಯೋದುಂಟೆ ಮೈಸೂರು ದೊರೆಯ ನಾಲ್ವಡಿ ಹಾಡಿಗೆ ನೀಡುತ್ತಾರೆ. ಮಂಡ್ಯ ಕೃಷಿ ಪ್ರಧಾನ ಜಿಲ್ಲೆಯಾಗಲೂ ನಾಲ್ವಡಿ ಕಾರಣ. ಇಂದು ಜಾಗತಿಕವಾಗಿ ಗುರುತಿಸಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೆ ಹಾಗೂ ಏಷ್ಯಾದಲ್ಲಿ ಪ್ರಪ್ರಥಮ ಬಾರಿಗೆ ವಿದ್ಯುತ್ ಬೀದಿ ದೀಪವನ್ನು ಅಳವಡಿಸಿದ ನಗರ ಎಂಬ ಕೀರ್ತಿ ಬರಲು ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.

ಏಷ್ಯಾದಲ್ಲೇ ಮೊದಲ ಬಾರಿಗೆ ಶಿವನಸಮುದ್ರದಲ್ಲಿ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ ಮಾಡಿದರು. ಅಂದಿನ ಕಾಲದಲ್ಲೇ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಅವರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ರಾಜರ್ಷಿ ಎಂದು ಬಿರುದು ನೀಡಿ ಗೌರವಿಸಿದರು ಎಂದರು.

ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ಇಂದು ನಮ್ಮ ಭಾಗದ ಜನರ ಜೀವನ ಮಟ್ಟ ಸುಧಾರಿಸಲು ಬಹು ಮುಖ್ಯ ಕಾರಣ ನಾಲ್ವಡಿ. ಶಾಲಾ ಮಕ್ಕಳ ಪ್ರವಾಸಕ್ಕೆ ಬೇರೆಲ್ಲೂ ಹೋಗುವ ಅಗತ್ಯವಿಲ್ಲ. ಮೈಸೂರಿನ ಅರಮನೆ, ಮೃಗಾಲಯ, ಕನ್ನಂಬಾಡಿ ಅಣೆಕಟ್ಟು, ಮೈಸೂರು ವಿಶ್ವವಿದ್ಯಾನಿಲಯವನ್ನು ತೋರಿಸಿ. ಮೈಸೂರು ಒಂದು ಪುಟ್ಟ ಪ್ರಪಂಚ ಎಂದರು.

ಮಹಿಳಾ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಶಿವರಾಮು ಮಾತನಾಡಿ, 1902 ರಿಂದ 1940 ರ ವರೆಗೆ ಸುಮಾರು 38 ವರ್ಷ ಕಾಲ ಮೈಸೂರು ಸಂಸ್ಥಾನವನ್ನು ಆಳಿದ ಹೆಗ್ಗಳಿಕೆ ನಾಲ್ವಡಿ ಕೃಷ್ಣರಾಜರಿಗಿದೆ. ಅವರ ಆಳ್ವಿಕೆಯ ಕಾಲವನ್ನು ಅನೇಕ ಬರಹಗಾರರು ಮೈಸೂರು ಸಂಸ್ಥಾನದ ಸುವರ್ಣ ಯುಗವೆಂದು ಉಲ್ಲೇಖಿಸಿದ್ದಾರೆ. ನಾವೆಲ್ಲರೂ ಸಮೃದ್ಧವಾಗಿ ಜೀವನ ಸಾಗಿಸಲು ಮುಖ್ಯ ಕಾರಣ ನಾಲ್ವಡಿ. ಮೊದಲು ನಮ್ಮ ಭಾಗದಲ್ಲಿ ನೀರಿನ ಅಭಾವ ಇತ್ತು, ರೈತರು ಕೃಷಿ ಮಾಡಲು ಸಮರ್ಪಕವಾಗಿ ನೀರು ದೊರೆಯುತ್ತಿರಲ್ಲಿಲ್ಲ. ಕಾವೇರಿ ನೀರು ವ್ಯರ್ಥವಾಗಿ ಹರಿಯುತ್ತಿತ್ತು. ಇದನ್ನು ಅರಿತ ನಾಲ್ವಡಿ ತಾಂತ್ರಿಕ ಮತ್ತು ನೀರಾವರಿ ತಜ್ಞರೊಂದಿಗೆ ಚರ್ಚಿಸಿ ಕನ್ನಂಬಾಡಿ ಬಳಿ ಅಣೆಕಟ್ಟು ನಿರ್ಮಿಸಲು ಕಾರಣಕರ್ತರಾದರು ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಇತರರಿದ್ದರು.

ಇದಕ್ಕೂ ಮುನ್ನ ಪುಷ್ಪಾಲಂಕೃತ ರಥದ ಮೇಲೆ ಇರಿಸಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಡಾ.ರೋಹಿಣಿ ಪುಷ್ಪಾರ್ಚನೆ ನೆರವೇರಿಸಿದರು. ಅಂತೆಯೇ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಹೊರಟ ಮೆರವಣಿಗೆ ಮೈಸೂರು-ಬೆಂಗಳೂರು ಹೆದ್ದಾರಿಯ ಮೂಲಕವಾಗಿ ಕಲಾಮಂದಿರದಲ್ಲಿ ಅಂತ್ಯಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net