

ಮಂಡ್ಯ: ನಾಲ್ವಡಿ ಕೃಷ್ಣರಾಜ ಒಡೆಯರ್ ಯುದ್ಧ ಮಾಡಲಿಲ್ಲ. ಆದರೆ, ಮೈಸೂರು ಸಂಸ್ಥಾನದ ಕೀರ್ತಿಯನ್ನು ದೇಶ-ವಿದೇಶಗಳಲ್ಲಿ ಹರಡುವಂತೆ ಮಾಡಿದರು. ಆ ಮೂಲಕ ಜನರಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ನಾಲ್ವಡಿ ಕೃಷ್ಣರಾಜ ಒಡೆಯರ್‌ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಸ್ಮರಿಸಿದರು.
ನಗರದ ಪೊಲೀಸ್ ಕಾಲನಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್‌ನಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲ್ವಡಿಯವರು ಜನಪರ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಆಡಳಿತದಿಂದ ಜನಪರ ರಾಜ ಎನಿಸಿಕೊಂಡಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಡಿಡಿಪಿಐ ಎಚ್.ಶಿವರಾಮೇಗೌಡ ಮಾತನಾಡಿ, ನೂರಾರು ಜನಪರ ಕಾರ್ಯಕ್ರಮಗಳನ್ನು ಜಾರಿ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್‌ಅವರು ನಮ್ಮೆಲ್ಲರಿಗೂ ಜೀವನ ರೂಪಿಸಿಕೊಟ್ಟಿದ್ದಾರೆ. ಅನ್ನ, ಬೆಳಕು, ಉದ್ಯೋಗ, ಬದುಕು ಕೊಟ್ಟವರು ನಾಲ್ವಡಿಯವರು. ಕೈಗಾರಿಕೆಗಳ ಸ್ಥಾಪನೆ, ರೈಲು ಮಾರ್ಗಗಳ ನಿರ್ಮಾಣದ ಮೂಲಕ ಸಮಾಜದ ಎಲ್ಲ ಸ್ತರದ ಜನರಿಗೂ ಅನುಕೂಲ ಕಲ್ಪಿಸಿದ್ದಾರೆ. ಅವರ ಕಾರ್ಯಗಳು ಮತ್ತೆ ಪುನರುತ್ಥಾನಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಇತಿಹಾಸ ಸಹ ಪ್ರಾಧ್ಯಾಪಕ ಡಾ.ಲಿಂಗರಾಜು ಅವರು ನಾಲ್ವಡಿ ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಗಾಯಕರಾದ ವೈರಮುಡಿ, ಹನಿಯಂಬಾಡಿ ಶೇಖರ್, ಕಾರಸವಾಡಿ ಸುರೇಶ್ ಅವರು ಜನಪದ ಗೀತೆ, ರಂಗಗೀತೆಗಳ ಗಾಯನದ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಇದೇ ವೇಳೆ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ನಾಲ್ವಡಿ ಅವರ ಬಗ್ಗೆ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಲಾಯಿತು.
ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ಪತ್ರಕರ್ತ ನವೀನ್ ಚಿಕ್ಕಮಂಡ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಿಂಗೇಗೌಡ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶಬಾನ, ಚಿತ್ರ ನಿರ್ದೇಶಕ ಅಭಿಗೌಡ ಹನಕೆರೆ, ಚೀರನಹಳ್ಳಿ ಗ್ರಾ.ಪಂ. ಉಮೇಶ್, ಮಂಗಲ ಗ್ರಾ.ಪಂ. ಸದಸ್ಯ ಮಹದೇವಸ್ವಾಮಿ, ಟ್ರಸ್ಟ್ ಕಾರ್ಯದರ್ಶಿ ಎಂ.ಸಿ.ಮಂಗಲ ಲಂಕೇಶ್, ಖಜಾಂಚಿ ಯರಹಳ್ಳಿ ನವೀನ್, ಪದಾಧಿಕಾರಿಗಳಾದ ತಗ್ಗಹಳ್ಳಿ ಮಂಜು, ಟಿ.ಡಿ.ನಾಗರಾಜು, ಚೀರನಹಳ್ಳಿ ಉಮೇಶ್, ತಗ್ಗಹಳ್ಳಿ ಲಿಂಗರಾಜು, ಸಿದ್ದರಾಜು, ಸುಬ್ರಮಣ್ಯ, ತಗ್ಗಹಳ್ಳಿ ಸಾಗರ್ ಇತರರಿದ್ದರು.