ಒಡೆಯರ್ ಕೊಡುಗೆ ನೀಡದ ಕ್ಷೇತ್ರವಿಲ್ಲ: ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಬಣ್ಣನೆ

Nalvadi Krishnaraja Wodeyar Jayanti mandya
Published on

ಮಂಡ್ಯ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೊಡುಗೆ ನೀಡದ ಕ್ಷೇತ್ರಗಳೇ ಇಲ್ಲ ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷರೂ ಆದ ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಹೇಳಿದರು.

ನಗರದ ಪ್ರವಾಸಿ ಮಂದಿರದ ಸಮೀಪ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಮತ್ತು ನೆಲದನಿ ಬಳಗ ಮಂಗಲ ಸಹಯೋಗದಲ್ಲಿ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ವರ್ಷದ ಜನ್ಮದಿನಾಚರಣೆ ಮತ್ತು ಮಜ್ಜಿಗೆ-ಪಾನಕ ವಿರತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಡಿನ ಜನತೆ ಪ್ರತಿದಿನದ ಬೆಳಗ್ಗೆ ಎದ್ದು ನೆನಸಿಕೊಳ್ಳಲೇಬೇಕಾದ ಮಹನೀಯರು ನಾಲ್ವಡಿ ಕೂಡ ಪ್ರಮುಖರು. ಆಧುನಿಕ ಮೈಸೂರು ರಾಜ್ಯ ನಿರ್ಮಾಣಕ್ಕೆ ಹಾಗೂ ಕರುನಾಡ ಅಭಿವೃದ್ಧಿಗೆ ಒಡೆಯರ್ ಕೊಡುಗೆ ಅಪಾರ. ಕೃಷಿ, ಕೈಗಾರಿಕೆ, ನೀರಾವರಿ, ಜಲ ವಿದ್ಯುತ್, ಶಿಕ್ಷಣ, ಆರೋಗ್ಯ, ಸಾಹಿತ್ಯ, ರಾಜಕೀಯ ಸೇರಿದಂತೆ ಹಲವು ವಲಯಗಳಲ್ಲಿ ಅಂದಿನ ಮೈಸೂರು ರಾಜ್ಯ ಮುಂಚೂಣಿಯಲ್ಲಿತ್ತು. ಅಭಿವೃದ್ದಿಯ ಹಿಂದೆ ಇವರ ಕೊಡುಗೆ ಅಪಾರವಾಗಿತ್ತು. ಅಂದು ಬೆಂಗಳೂರು, ಮೈಸೂರು ನಗರಗಳು ಎಲ್ಲರ ಆಕರ್ಷಣೆಯ ಕೇಂದ್ರವಾಗುವಂತೆ ಮಾಡಿದ್ದು ಅವಿಸ್ಮರಣೀಯ ಎಂದರು.

ನೆಲದನಿ ಬಳಗದ ಅಧ್ಯಕ್ಷ ಮಂಗಲ ಎಂ.ಸಿ.ಲಂಕೇಶ್ ಮಾತನಾಡಿ, ಗಾಂಧೀಜಿ ಕಂಡ ಕನಸನ್ನು ನನಸು ಮಾಡಿದ ಮಹಾನ್ ಪುರುಷ ನಾಲ್ವಡಿ ಕೃಷ್ಣರಾಜ ಒಡೆಯರ್. ಸರ್ವ ಜನಾಂಗವನ್ನು ಒಂದೇ ಸೂರಿನಲ್ಲಿ ಬದುಕುವಂತೆ ಮಾಡಿ ಸರ್ವರಿಗೂ ಸಮಾನತೆ ಸಾರಿ, ದಲಿತರಿಗೆ ಮೀಸಲಾತಿ ಕಲ್ಪಿಸುವುದು ಸೇರಿದಂತೆ ಎಲ್ಲರಿಗೂ ಎಲ್ಲ ವರ್ಗದ ಜನರಿಗೂ ವಿದ್ಯಾಭ್ಯಾಸ ಹಾಗೂ ಉದ್ಯೋಗವನ್ನು ಕಲ್ಪಿಸಿಕೊಟ್ಟರು. ಮಹಿಳೆಯರ ಸಬಲೀಕರಣಕ್ಕಾಗಿ ಅವರು ಅನೇಕ ಅನಿಷ್ಟ ಪದ್ಧತಿಗಳನ್ನು ನಿಷೇಧಿಸಿದರು. ಹೊಸ ಕಾನೂನುಗಳನ್ನು ನೀಡಿ, ಮಹಿಳೆಯ ಪ್ರಗತಿಗೆ ಹೊಸ ನಾಂದಿ ಹಾಕಿದರು ಎಂದು ತಿಳಿಸಿದರು.

ಕಸಾಪ ನಗರಾಧ್ಯಕ್ಷೆ ಸುಜಾತಾ ಕೃಷ್ಣ, ಪ್ರಗತಿಪರ ಹೋರಾಟಗಾರ್ತಿ ನಾಗರತ್ನ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ತಗ್ಗಹಳ್ಳಿ ನಾಗರಾಜು, ಮಂಗಲ ಮಹಾದೇವ, ರತ್ನಜೈನ್, ಸಚ್ಚಿನ್, ಬುಜಹಳ್ಳಿ ರಾಮಚಂದ್ರ, ಲಿಂಗಪ್ಪ, ಸಿದ್ದೇಗೌಡ, ಜಗದೀಶ್, ನವೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net