

ಮಂಡ್ಯ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಡೀ ಮನುಕುಲಕ್ಕೆ ಮಾದರಿಯಾದ ಆಡಳಿತ ನೀಡಿದ್ದಾರೆ ಎಂದು ಮಿಮ್ಸ್‌ನ ನಿವೃತ್ತ ಪ್ರಾಂಶುಪಾಲ ಡಾ.ಕೆ.ಎಂ.ಶಿವಕುಮಾರ್ ಶ್ಲಾಘಿಸಿದರು.
ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ, ಸಕ್ಕರೆನಾಡು ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 139ನೇ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಉತ್ತಮ ಸಮಾಜವನ್ನು ಹೇಗೆ ಕಟ್ಟಬಹುದು. ನಾಡಿಗೆ, ಜನರಿಗೆ ಏನು ಬೇಕಾಗಿದೆ. ಅದನ್ನು ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟ ಒಬ್ಬ ಮಹಾನ್ ಸಾಧಕರು. ದೂರದೃಷ್ಠಿಯ ಯೋಜನೆಗಳನ್ನು ರೂಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಸಾವಿರಾರು ವರ್ಷಗಳ ಕಾಲ ಯಾರೂ ಮಾಡದ ಸಾಧನೆಗಳನ್ನು ಮಾಡಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದರು.
ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ನಾಲ್ವಡಿ ಅವರು ಜಗತ್ತಿಗೆ ಮಾದರಿ ಆಡಳಿತ ನೀಡಿದ್ದರು. ಸಮಾಜಕ್ಕೆ ಅಗತ್ಯವಿರುವ ಕೊಡುಗೆಯನ್ನು ನೀಡಿದ್ದಾರೆ. ಹಲವಾರು ಸಾಮಾಜಿಕ ಪಿಡುಗುಗಳಿಗೆ ತಿಲಾಂಜಲಿ ನೀಡಿದ್ದಾರೆ ಎಂದರು.
ಬ್ರಾಹ್ಮಣಸಭಾ ನಿರ್ದೆಶಕ ಜಿ.ವಿ.ನಾಗರಾಜು, ಮಂಗಲ ಯೋಗೀಶ್, ಕೆ.ಆರ್.ಶಶಿಧರ್ ಈಚಗೆರೆ, ಪ್ರತಿಭಾಂಜಲಿ ಅಕಾಡೆಮಿಯ ಡೇವಿಡ್, ವೀರಪ್ಪ ಇತರರಿದ್ದರು.
ಇದೇ ವೇಳೆ ಮಿಮ್ಸ್‌ನ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ಉಮೇಶ್ ಮತ್ತು ನಿವೃತ್ತ ಗಣಿತ ಪರಿವೀಕ್ಷಕ ಎಸ್.ಲೋಕೇಶ್ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.