ನಾಲ್ವಡಿಯವರ ದೂರದೃಷ್ಟಿಯಿಂದ ಮೈಸೂರು ಪ್ರಗತಿ

IMG-20250604-WA0262
ಕೆ.ಆರ್.ಪೇಟೆ ಪಟ್ಟಣದ ತಾಲೂಕು ಆಡಳಿತ ಕಾರ್ಯಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಮಹೋತ್ಸವದಲ್ಲಿ ನಾಲ್ವಡಿ ಅವರ ಭಾವಚಿತ್ರಕ್ಕೆ ತಹಸೀಲ್ದಾರ್ ಡಾ.ಅಶೋಕ್ ಪೂಜೆ ಸಲ್ಲಿಸಿದರು.
Published on

ಕೆ.ಆರ್.ಪೇಟೆ: ಅಭಿವೃದ್ಧಿಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಆಡಳಿತದಿಂದಾಗಿ ಮೈಸೂರು ಪ್ರಗತಿ ಸಾಧಿಸಲು ಸಾಧ್ಯವಾಯಿತು ಎಂದು ತಹಸೀಲ್ದಾರ್ ಡಾ.ಅಶೋಕ್ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಕಾರ್ಯಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಮಹೋತ್ಸವದಲ್ಲಿ ಮಾತನಾಡಿದ ಅವರು, ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಆಣೆಕಟ್ಟೆ ನಿರ್ಮಿಸಿ ಬರಡಾಗಿದ್ದ ಮಂಡ್ಯ ಜಿಲ್ಲೆಯನ್ನು ಭತ್ತ, ಕಬ್ಬು, ತೆಂಗು ಬೆಳೆಯುವ ಬಂಗಾರದ ಭೂಮಿಯನ್ನಾಗಿಸಿ ಜಿಲ್ಲೆಯ ಜನರು ನೆಮ್ಮದಿಯ ಜೀವನ ನಡೆಸಲು ಕಾರಣರಾದರು. ಅಣೆಕಟ್ಟೆ ಸಂಪೂರ್ಣಗೊಳ್ಳಲು ಹಣಕಾಸು ಸಮಸ್ಯೆ ಎದುರಾದಾಗ ಅರಮನೆಯ ತಿಜೋರಿಯಲ್ಲಿದ್ದ ಚಿನ್ನ, ವಜ್ರದ ಆಭರಣಗಳನ್ನು ಮುಂಬೈ ಮಹಾನಗರದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಕಾಮಗಾರಿ ಸಂಪೂರ್ಣಗೊಳಿಸಿ ಜನತೆಯ ಸೇವೆಗೆ ಸಮರ್ಪಿಸಿ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಗುಣಗಾನ ಮಾಡಿದರು.

ಶಿಕ್ಷಣ, ಆರೋಗ್ಯ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ಕ್ರಾಂತಿ ಮಾಡಿದ ರಾಜರ್ಷಿ ನಾಲ್ವಡಿ ಅವರು ಮೀಸಲಾತಿ ವ್ಯವಸ್ಥೆಗೆ ಚಾಲನೆ ನೀಡಿ, ತುಳಿತಕ್ಕೊಳಗದವರು ಹಾಗೂ ಶೋಷಿತ ವರ್ಗಗಳ ಜನರಿಗೆ ಸಾಮಾಜಿಕ ನ್ಯಾಯವನ್ನು ನೀಡಿದ ಮಹಾನುಭಾವರಾಗಿದ್ದಾರೆ. ನಾಲ್ವಡಿ ಅವರ ಸಮಾಜ ಸೇವಾ ಕಾರ್ಯಗಳು ಹಾಗೂ ನಾಡಿನ ಅಭಿವೃದ್ಧಿಗೆ ಕೈಗೊಂಡ ದಿಟ್ಟ ಕ್ರಮಗಳು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗಿವೆ ಎಂದು ಸ್ಮರಿಸಿದರು.

ಬಹುಜನ ಸಮಾಜ ಪಾರ್ಟಿಯ ತಾಲೂಕು ಮುಖಂಡ ಗಂಗಾಧರ್, ಸಮಾಜ ಸೇವಕ ಡಾ.ಕೆ.ಎಂ.ಶಿವಪ್ಪ, ಸೆಸ್ಕ್ ಇಇ ಪುಟ್ಟಸ್ವಾಮಿ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷೆ ಬಿ.ಎಲ್.ಚಂದ್ರಕಲಾ, ಆರೋಗ್ಯ ಇಲಾಖೆಯ ಶೀಳನೆರೆ ಸತೀಶ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿವಾಕರ್, ಬಿಸಿಎಂ ಅಧಿಕಾರಿ ವೆಂಕಟೇಶ್, ಗ್ರೇಡ್-2 ತಹಸೀಲ್ದಾರ್ ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net