

ಮಂಡ್ಯ: ರಾಜ ಇರುವುದು ಜನಸೇವೆಗಾಗಿಯೇ ಹೊರತು ಸುಖಿಜೀವನಕ್ಕಾಗಲ್ಲ ಎನ್ನುವ ಮೂಲಕ ಜನಸೇವೆಗಾಗಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನವನ್ನೇ ಮುಡಿಪಾಗಿಟ್ಟವರು ಎಂದು ಕವಿ, ವೈದ್ಯ ಡಾ.ಚಂದ್ರಶೇಖರ್ ಶ್ಲಾಘಿಸಿದರು.
ನಗರದ ಗಾಂಧಿಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ಹಾಗೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ವತಿಯಿಂದ ನಾಲ್ವಡಿ ಜಯಂತಿ ಅಂಗವಾಗಿ ಆಯೋಜಿಸಿದ್ದ ತೃತೀಯ ಅಕ್ಷರ ಜಾತ್ರೆಯ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತನ್ನ ಆಳ್ವಿಕೆಯಲ್ಲಿ ತಮ್ಮನ್ನು ನಂಬಿರುವ ಪ್ರಜೆಗಳಿಗೆ ಯಾವುದೇ ಸಮಸ್ಯೆಯಾಗಬಾರದೆಂಬ ನಿಟ್ಟಿನಲ್ಲಿ ಶ್ರಮಿಸಿದ್ದರು. ಆಗಿನ ಕಾಲದಲ್ಲೇ ಪ್ರಗತಿಪರ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಲು ಮಿಲ್ಲರ್ ಆಯೋಗ ರಚಿಸಿ, ಶೋಷಿತರ ಸುಧಾರಣೆಗೆ ಅನೇಕ ಕಾನೂನು ತಂದ ಸಾಮಾಜಿಕ ಹರಿಕಾರ ಎಂದರು.
ಮತದಾನ ಪದ್ಧತಿಯಲ್ಲಿ ಸುಧಾರಣೆ, ಮಹಿಳೆಯರಿಗೂ ಮತದಾನ ಹಕ್ಕು, ಸಣ್ಣಪುಟ್ಟ ಪಟ್ಟಣಗಳ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳನ್ನು ರಚನೆ, ಹಳ್ಳಿಗಳಲ್ಲಿ ಮೊದಲ ಬಾರಿಗೆ ಗ್ರಾಮಪಂಚಾಯಿತಿ ರಚನೆ, ಗ್ರಾಮ ನೈರ್ಮಲ್ಯೀಕರಣ, ವೈದ್ಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಕಾರಣರಾದರು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ, ಪ್ರತಿ ಸಮಾಜಮುಖಿ ಕೆಲಸಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿಯಾಗಿದ್ದಾರೆ. ಅವರ ಕೊಡುಗೆಯಿಂದ ಮಂಡ್ಯ ಜಿಲ್ಲೆ ನೀರಾವರಿ, ಕೈಗಾರಿಕೆ ಸೇರಿದಂತೆ ಇನ್ನಿತರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡಿದೆ. ನಾಲ್ವಡಿ ಅವರು ನಮ್ಮನ್ನಗಲಿ ಹಲವು ದಶಕಗಳೇ ಕಳೆದಿದ್ದರೂ ನಾವು ಅವರನ್ನು ಸ್ಮರಿಸುತ್ತೇವೆ. ಅದಕ್ಕೆ ಪ್ರಮುಖ ಕಾರಣ ಅವರ ಅಭಿವೃದ್ಧಿ ಕೆಲಸಗಳು. ಕೆಆರ್‌ಎಸ್ ಅಣೆಕಟ್ಟೆ, ಮೈಷುಗರ್ ಕಾರ್ಖಾನೆಯ ನಿರ್ಮಾಣ ಮಾಡಿದರು. ಅವರಿಂದ ನಮ್ಮ ಜಿಲ್ಲೆ ಸಂಪದ್ಭರಿತವಾಗಿದೆ ಎಂದು ಬಣ್ಣಿಸಿದರು.
ಮಾಜಿ ಶಾಸಕ ಎಂ.ಶ್ರೀನಿವಾಸ್ ಮತ್ತು ರೇಷ್ಮೆ ತಜ್ಞ ಕಿರಣಗೆರೆ ಜಗದೀಶ್ ಮಾತನಾಡಿದರು. ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಡಾ.ಸಿ.ಕೆ.ರಾಮೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಪ್ರಧಾನ ಕಾರ್ಯದರ್ಶಿ ಮಂಗಲ ಶಿವಣ್ಣ, ಉಪಾಧ್ಯಕ್ಷ ರಾಗಿಮುದ್ದನಹಳ್ಳಿ ನಾಗೇಶ್ ಉಪಸ್ಥಿತರಿದ್ದರು.
ಇದೇ ವೇಳೆ ಡಾ.ಸತ್ಯನಾರಾಯಣರಾವ್, ಡಾ.ಪುಟ್ಟಸ್ವಾಮಿಗೌಡ, ಡಾ.ಸೂರ್ಯನಾರಾಯಣ ಶರ್ಮಾ, ಡಾ.ಮಾದೇಶ್ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ವೈದ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂತೆಯೇ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕನ್ನಡರತ್ನ, ಕಲಾರತ್ನ, ಕಾವ್ಯಶ್ರೀ ಹಾಗೂ ಕವಿರತ್ನ ಪ್ರಶಸ್ತಿ ನೀಡಲಾಯಿತು.