ನಾಲ್ವಡಿ ಕೃಷ್ಣರಾಜ ಒಡೆಯರ್ ದೇಶಕ್ಕೆ ಮಾದರಿ: ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ ಬಣ್ಣನೆ

01
Published on

ಮೈಸೂರು: ನಾಡಿನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರಗತಿಗೆ ದುಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಇಡೀ ದೇಶಕ್ಕೆ ಮಾದರಿ ರಾಜರಾಗಿದ್ದರು ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ ಬಣ್ಣಿಸಿದರು.

ಕುವೆಂಪು ಕಲಾನಿಕೇತನ ಸಂಸ್ಥೆಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141ನೇ ಜಯಂತಿಯ ಸಾಂಸ್ಕೃತಿಕ ಕಲಾ ಸಂಭ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಪ್ರಗತಿಗೆ ವಿಶೇಷವಾಗಿ ಒತ್ತು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ವಿಶ್ವವಿದ್ಯಾನಿಲಯ ಸೇರಿದಂತೆ ಅನೇಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಜ್ಞಾನ ಮತ್ತು ಅನುಭವ ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡಿದರು ಎಂದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಿ, ಅವರಿಗಾಗಿ ಶಾಲೆ ತೆರೆದರು. ಬಾಲ್ಯ ವಿವಾಹ ರದ್ದು ಮಾಡಿ ಪ್ರಗತಿಪರತೆ ಮೆರೆದರು. ಮೀಸಲಾತಿ, ಅನೇಕ ಕೈಗಾರಿಕೆಗಳು, ನೀರಾವರಿ ಸೇರಿದಂತೆ ಅನೇಕ ಜನಮುಖಿ ಕೆಲಸಗಳ ಕಾರಣರಾದ ಅವರ ಹೆಸರು ಕನ್ನಡ ನೆಲದಲ್ಲಿ ಶಾಶ್ವತವಾಗಿ ಉಳಿದಿರುತ್ತದೆ. ಸರ್ವೋತೋಮುಖ ಅಭಿವೃದ್ಧಿಗೆ ಒತ್ತು ನೀಡಿದ್ದ ನಾಲ್ವಡಿ ಅವರು ದೇಶ ಕಂಡ ಜನಪರ ಮತ್ತು ಪ್ರಗತಿಪರ ವ್ಯಕ್ತಿತ್ವದ ಅಪರೂಪದ ಮಹಾನ್ ಚೇತನ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಮಾತನಾಡಿ, ಇಂದಿನದ್ದು ಪ್ರಶಸ್ತಿಗಳ ಸುಗ್ಗಿಕಾಲವಾಗಿದ್ದು, ಎರಡು ದೃಷ್ಟಿಯಿಂದ ಈ ಪ್ರಶಸ್ತಿಗಳು ಸ್ವಾಗತಾರ್ಹವಾಗಿವೆ. ಒಂದು ಇನ್ನೂ ಬೆಳೆಯುವ ಹಂತದಲ್ಲಿ ಇರುವ ಉದಯೋನ್ಮುಖ ಸಾಧಕರಿಗೆ ಪ್ರೋತ್ಸಾಹದಾಯಕವಾಗಿ ನೀಡುವುದು. ಮತ್ತೊಂದು ಈಗಾಗಲೇ ಸಿದ್ಧಿಸಾಧನೆಯ ಹಂತ ತಲುಪಿದವರಿಗೆ ಕೃತಜ್ಞತೆಯ ರೂಪದಲ್ಲಿ ಪ್ರಶಸ್ತಿ ಸಲ್ಲಿಸುವುದು. ಈ ಎರಡೂ ನೆಲೆಯಲ್ಲಿ ಕೂಡ ನಾಲ್ವಡಿ ಹೆಸರಿನಲ್ಲಿ ಅರ್ಹ ಸಾಧಕರಿಗೆ ಪ್ರಶಸ್ತಿ ದೊರೆತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ತುಮಕೂರಿನ ನರಸಿಂಹಗಿರಿ ಮಠದ ಪೀಠಾಧಿಪತಿ ಡಾ. ಶ್ರೀಹನುಮಂತನಾಥ ಸ್ವಾಮೀಜಿ ಮಾತನಾಡಿ, ಪ್ರಶಸ್ತಿಗಳು ಮಾರಾಟವಾಗುವ ಸ್ಥಿತಿ ಬಂದಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಸರ್ಕಾರ ನಿಜವಾದ ಸಾಧಕರನ್ನು ಗುರುತಿಸಿ ಗೌರವಿಸಬೇಕು ಎಂದು ಸಲಹೆ ನೀಡಿದರು.

ಯಾಂತ್ರಿಕ ಜಗತ್ತಿನಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ನೆಲ, ಜಲ, ಭಾಷೆ, ಸಾಹಿತ್ಯದ ಬಗ್ಗೆ ಕನ್ನಡಿಗರಲ್ಲೇ ಗೌರವ ಕಡಿಮೆಯಾಗಿದೆ. ಯಾವುದೋ ದೇಶಕ್ಕೆ ತೆರಳಿದರೂ ಹಣ ಮಾಡಬಹುದೇ ಹೊರತು ನಮ್ಮ ಭಾರತೀಯ ಮಣ್ಣಿನ ಆತ್ಮೀಯತೆ ದೊರೆಯುವುದಿಲ್ಲ. ಹೀಗಾಗಿ ಕನ್ನಡ ನಾಡು ಕಟ್ಟುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.

ಹಿರಿಯ ಕವಯಿತ್ರಿ ಡಾ.ಲತಾ ರಾಜಶೇಖರ, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಬಿ.ಜಯಪ್ರಕಾಶ್‌ಗೌಡ ಅವರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು, ಕೆ.ಎಸ್.ನ. ಟ್ರಸ್ಟ್ ಅಧ್ಯಕ್ಷ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ರುದ್ರೇಶ್, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಜಿ.ಪಿ.ಒ. ಚಂದ್ರು, ನಗರಪಾಲಿಕೆಯ ಮಾಜಿ ಸದಸ್ಯರಾದ ಕೆ.ವಿ.ಮಲ್ಲೇಶ್, ಎಂ.ಪ್ರಮೀಳಾ ಭರತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕುವೆಂಪು ಕಲಾನಿಕೇತನ ಸಂಸ್ಥೆಯ ಅಧ್ಯಕ್ಷ ಕುವೆಂಪು ಪ್ರಕಾಶ್, ಮಾಜಿ ಅರಣ್ಯಾಧಿಕಾರಿ ಎಸ್. ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net