ಸಂಗೀತದಿಂದ ಜನರ ಹೃದಯ ಗೆದ್ದ ಹಂಸಲೇಖ: ಕೇಂದ್ರ ವಲಯ ಐಜಿ ಬಿ.ರ್.ರವಿಕಾಂತೇಗೌಡ ಹೇಳಿಕೆ

Nalvadi Krishnaraja Wodeyar award presentation Mandya
Published on

ಮಂಡ್ಯ: ಜನಕೇಂದ್ರಿತ ಸಂಗೀತಗಾರ ಹಂಸಲೇಖ ಅವರು ಎಲ್ಲರನ್ನು ತಮ್ಮ ಹಾಡಿನ ಮೂಲಕ ಒಟ್ಟುಗೂಡಿಸಿ ಕರೆದುಕೊಂಡು ಹೋಗುವ ಕೆಲಸ ಮಾಡಿದವರು. ಜತೆಗೆ ಸಂಗೀತದ ಶಕ್ತಿ ಮೂಲಕವೇ ಜನರ ಹೃದಯ ಗೆದ್ದವರು ಎಂದು ಕೇಂದ್ರ ವಲಯ ಐಜಿ ಬಿ.ರ್.ರವಿಕಾಂತೇಗೌಡ ಹೇಳಿದರು.

ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆಹಾರ ಹಾಗೂ ಮತೀಯ ರಾಜಕಾರಣ ವಿರೋಧಿಸಿದ ಸಂಗೀತ ಬ್ರಹ್ಮ ಹಂಸಲೇಖ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡುತ್ತಿರುವುದು ಸರಿಯಾಗಿದೆ. ಸಾಹಿತ್ಯವನ್ನು ಅಚ್ಚುಕಟ್ಟಾಗಿ ಬರೆಯುವ ಕೆಲವೇ ಕೆಲವರಲ್ಲಿ ಇವರು ಕೂಡ ಒಬ್ಬರು ಎಂದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಪ್ರಜಾಪ್ರಭುತ್ವ ಹೇಗಿರಬೇಕು ಎನ್ನುವುದನ್ನು ನಾಲ್ವಡಿ ಅವರು ತಮ್ಮ ಆಡಳಿತದ ಮೂಲಕ ತೋರಿಸಿಕೊಟ್ಟರು. ಕೆಂಪೇಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸರಿಸಾಟಿಯಾದ ಆಡಳಿತಗಾರರು ಮತ್ತೊಬ್ಬರಿಲ್ಲ ಎಂದು ಶ್ಲಾಘಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಹಂಸಲೇಖ ಅವರು ಸಂಗೀತ ಲೋಕಕ್ಕೆ ಬಡತನದ ಬೇಗೆಯಲ್ಲಿ ಬೆಂದ ಪ್ರತಿಭೆಗಳನ್ನು ಪರಿಚಯಿಸಿದ್ದಾರೆ. ದೇಸಿ ಸಂಗೀತ ಪ್ರತಿಭೆಗಳನ್ನು ನಾಡಿಗೆ ಕೊಡುಗೆಯಾಗಿ ನೀಡುತ್ತಿರುವ ಅವರಿಗೆ ನಾಲ್ವಡಿ ಹೆಸರಿನ ಪ್ರಶಸ್ತಿ ದೊರಕುತ್ತಿರುವುದು ಜಿಲ್ಲೆಯ ಸೌಭಾಗ್ಯ. ಇವರು ನಮ್ಮ ಕನ್ನಂಬಾಡಿ ಅವರು ಎನ್ನುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಸ್ಮರಿಸಿದರು.

ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಾಸಕ ರವಿಕುಮಾರ್ ಗಣಿಗ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ನಾಗರಾಜು ವಿ.ಭೈರಿ, ತಗ್ಗಹಳ್ಳಿ ವೆಂಕಟೇಶ್, ಪ್ರೊ.ಶಂಕರೇಗೌಡ, ಪಿ.ಲೋಕೇಶ್ ಚಂದಗಾಲು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net