ನಾಲ್ವಡಿ ಆಡಳಿತ ರಾಜಕಾರಣಿಗಳಿಗೆ ಮಾದರಿಯಾಗಲಿ: ಪ್ರಶಸ್ತಿ ಸ್ವೀಕರಿಸಿ ಸಭಾಪತಿ ಬಸವರಾಜ ಹೊರಟ್ಟಿ ಅಭಿಮತ

Nalvadi Krishnaraja Wodeyar Award Ceremony Mandya
Published on

ಮಂಡ್ಯ: ಕರ್ನಾಟಕ ಇಬ್ಭಾಗ ಮಾಡುತ್ತೇವೆನ್ನುವ ಕೆಲ ರಾಜಕಾರಣಿಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ನೋಡಿ ಕಲಿಯಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅಖಂಡ ಕರ್ನಾಟಕಕ್ಕೆ ಹೋರಾಟ ಮಾಡಿದ ನಾಯಕರು ಕಟ್ಟಿದ ನಾಡನ್ನು ಒಡೆದು ಹಾಳು ಮಾಡುವುದು ಬೇಡ ಎನ್ನುವ ಮಾತನ್ನು ಹೇಳಿದ್ದೆ. ಉತ್ತರ ಕರ್ನಾಟಕವನ್ನ ವಿಭಜನೆ ಮಾಡಿ ಮಣ್ಣು ತಿನ್ನಬೇಕಾ? ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಹಾಳಾಗಬೇಕಾದರೆ ನಾವು ಕಾರಣವೇ ಹೊರತು ಸರ್ಕಾರವಲ್ಲ ಎಂದು ಪ್ರತಿಪಾದಿಸಿದರು.

ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ ಕೆ.ವಿ.ಶಂಕರಗೌಡ ಅವರ ಮಾದರಿಯನ್ನಾಗಿಟ್ಟುಕೊಂಡು ನಾನು ಶಿಕ್ಷಣ ಸಚಿವನಾದೆ. ನನ್ನ 20 ತಿಂಗಳ ಅವಧಿಯಲ್ಲಿ ಬಿಸಿಯೂಟ ಯೋಜನೆ, ಶಿಕ್ಷಕರ ನೇಮಕ ಸೇರಿದಂತೆ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದೆ. ನನ್ನ ಮೇಲೆ ನಂಬಿಕೆಯಿಟ್ಟ ಎಚ್.ಡಿ.ದೇವೇಗೌಡರ ನಂಬಿಕೆಯನ್ನು ಉಳಿಸಿಕೊಂಡೆ. ಶಿಕ್ಷಕರು ನೆಮ್ಮದಿಯಾಗಿದ್ದರೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಮಾಡುತ್ತಾರೆ ಎನ್ನುವುದನ್ನು ಮನಗಂಡು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾಗಿ ಯಶಸ್ವಿಯಾದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಶಸ್ತಿ ಪಡೆದಿದ್ದಕ್ಕೆ ಅತೀವ ಖುಷಿ ಇದೆ. ಈ ಪ್ರಶಸ್ತಿಯನ್ನು ಮನೆಯಲ್ಲಿಟ್ಟು ಪೂಜಿಸುತ್ತೇನೆ. ನಾಲ್ವಡಿ ಅವರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಅವರು ಹಾಕಿಕೊಟ್ಟ ಆಡಳಿತದ ಮಾದರಿ ನಮಗೆ ಪ್ರೇರಣೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ಉತ್ತರ ಕರ್ನಾಟಕ ಭಾಗಕ್ಕೆ ಸೇರಿದ ಬಸವರಾಜ ಹೊರಟ್ಟಿ ಅವರಿಗೆ ದಕ್ಷಿಣ ಕರ್ನಾಟಕದ ಪ್ರಮುಖವಾಗಿ ಹತ್ತು ಜಿಲ್ಲೆಗಳನ್ನು ಒಳಗೊಂಡ ಈ ಪ್ರದೇಶದಲ್ಲಿ ಆಳ್ವಿಕೆ ಮಾಡಿದ ರಾಜರ್ಷಿ ನಾಲ್ವಡಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅಖಂಡ ಕರ್ನಾಟಕದ ಕಲ್ಪನೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಸ್ಮರಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಬಸವರಾಜ ಹೊರಟ್ಟಿ ಅವರು ಅವ್ವ ಸೇವಾ ಟ್ರಸ್ಟ್ ಸ್ಥಾಪಿಸಿ ಜನರಿಗೆ ದನಿಯಾದರು. ನಂತರ ಎಂಟು ಬಾರಿ ಶಾಸಕರಾಗಿ, ವಿವಿಧ ಖಾತೆಗಳ ಸಚಿವರಾಗಿ ಇಂದು ಸಭಾಪತಿಯಾಗಿ ಅತ್ಯಂತ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. 50 ವರ್ಷದ ರಾಜಕೀಯ ಮುಗಿಸಿ ಮುನ್ನುಗ್ಗುತ್ತಿರುವ ಹೊರಟ್ಟಿ ಅವರ ವಿಶ್ವಾಸ ಮೆಚ್ಚುವಂತದ್ದು, ಶಿಕ್ಷಣ ಕ್ಷೇತ್ರದ ಆಳ ಮತ್ತು ಅಗಲವನ್ನು ಬಸವರಾಜ ಹೊರಟ್ಟಿ ಅವರು ತಿಳಿದಿದ್ದಾರೆ ಎಂದು ಶ್ಲಾಘಿಸಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಿದರು. ಶಿಕ್ಷಕ ಮತ್ತು ಲೇಖಕ ಲೋಕೇಶ್ ಚಂದಗಾಲು ಅವರ ನಾಲ್ವಡಿ ನಾಡು ಕೃತಿಯನ್ನು ಬಿಡುಗಡೆ ಮಾಡಲಾಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಾಜಣ್ಣ, ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net