ನಲ್ಲೂರು ಗ್ರಾಮ ಗೌರಿ ವಿಸರ್ಜನೆ ಕಾರ್ಯಕ್ರಮ 20ಕ್ಕೆ

16ald 1
ಚಿಕ್ಕಮಗಳೂರು ಸಮೀಪದ ನಲ್ಲೂರು ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಿರುವ ಗೌರಿ ಮೂರ್ತಿ.
Published on

ಆಲ್ದೂರು: ನಲ್ಲೂರು ಗ್ರಾಮದಲ್ಲಿ ಪ್ರತಿಷ್ಟಾಪಿಸಿರುವ ಗೌರಿ ವಿಸರ್ಜನೆ ಕಾರ್ಯಕ್ರಮ ಇದೇ ತಿಂಗಳ 20 ಹಾಗೂ 21ರಂದು ನಡೆಯಲಿದೆ.
ನಲ್ಲೂರು ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ವೀರಭದ್ರ ಸ್ವಾಮಿ ಗರ್ಭ ಗುಡಿ ಬಲ ಭಾಗದಲ್ಲಿ ಸ್ವರ್ಣಗೌರಿ ಹಬ್ಬದ ದಿನ ಗೌರಿ ಪ್ರತಿಷ್ಟಾಪಿಸಿ ತಿಂಗಳು ಪೂಜಿಸಿ ನಂತರ ಗ್ರಾಮದ ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ.
ಈ ದೇವಸ್ಥಾನ ನಿರ್ಮಾಣದ ವೇಳೆಗೆ ವೀರಭದ್ರ ಸ್ವಾಮಿ ಬಲಭಾಗದಲ್ಲಿ ಗೌರಮ್ಮ ದೇವಿಗೆ ಪ್ರತ್ಯೇಕ ಗದ್ದುಗೆ ನಿರ್ಮಿಸಲಾಗಿದೆ. ಎಡಭಾಗದಲ್ಲಿ ಗಣಪತಿಗೆ ಪ್ರತ್ಯೇಕ ಗುಡಿ ನಿರ್ಮಿಸಲಾಗಿದೆ. ಪ್ರತಿ ವರ್ಷ ಗೌರಿ ಹಾಗೂ ಗಣೇಶ ಚತುರ್ಥಿ ದಿನ ಗೌರಿ, ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪಿಸುತ್ತಾರೆ.
ಈ ಗೌರಿದೇವಿ ಮೂರ್ತಿಯನ್ನು 400 ವರ್ಷಗಳಿಂದಲೂ ಒಂದೇ ಮನೆತನದವರು ತಯಾರು ಮಾಡುತ್ತಿದ್ದಾರೆ. ಮೂರ್ತಿಯ ಕೊರಳಿನಲ್ಲಿ ಮುತ್ತಿನ ಹಾರ, ಹೊಳೆಯುವ ಮೂಗುತಿ. ಹೊಳೆಯುವ ಕಿರೀಟ ಹಾಗೂ ಅದ್ಬುತ ರೂಪದಿಂದ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಪೂಜೆ ನಡೆಯುತ್ತದೆ. ಮುತ್ತೈದೆಯರು ಗೌರಿಯನ್ನು ಪೂಜಿಸಿ ಮಡಿಲಕ್ಕಿ ಅರ್ಪಿಸುತ್ತಾರೆ.
ಒಂದು ತಿಂಗಳು ಗ್ರಾಮದವರು ಒಟ್ಟಾಗಿ ಗೌರಿಹಾಗೂ ಗಣೇಶನನ್ನು ಪೂಜಿಸಿ ವಿಸರ್ಜನೆ ದಿನ ಪಲ್ಲಕ್ಕಿಯಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ನಂತರ ನಲ್ಲೂರು ಗ್ರಾಮದ ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ನಂತರ ಗ್ರಾಮಸ್ಥರು ತನ್ನ ಬಂಧುಗಳ ಜತೆ ಹಬ್ಬ ಆಚರಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net