

ಮಾಯಕೊಂಡ: ಹೋಬಳಿಯ ನಲ್ಕುಂದ ಗ್ರಾಮದಲ್ಲಿ ಕಂಬದ ನರಸಿಂಹ ಸ್ವಾಮಿಯ ಕಾಳು ಹಬ್ಬ ಗುರುವಾರ ವಿಜೃಂಭಣೆಯಿಂದ ನಡೆಯಿತು. ಪ್ರತಿ ವರ್ಷ ಭರತ ಹುಣ್ಣಿಮೆಯ ದಿನದಿಂದ ಆರಂಭಿಸಿ ಮೂರು ದಿನ ಹಬ್ಬವನ್ನು ಆಚರಿಸಲಾಗುತ್ತದೆ.
ಭರತ ಹುಣ್ಣಿಮೆಯ ಹಬ್ಬದ ಮೊದಲನೇ ದಿನ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಹೊಳೆ ಪೂಜೆ ಮುಗಿಸಿ ಮದುವಣ ಶಾಸ್ತ್ರ, ವಿಶೇಷ ಅಲಂಕಾರ ಮಾಡಿ ಗ್ರಾಮದ ಮಧ್ಯಭಾ ಗದಲ್ಲಿರುವ ದೇವಾಲಯಕ್ಕೆ ಕರೆತಂದು ಕೂರಿಸಲಾಯಿತು.
ಪಲ್ಲಕ್ಕಿಯಲ್ಲಿ ಅಲಂಕಾರಗೊಂಡ ಕುದುರೆ ಮೇಲೆ ಕೂರಿಸಿದ ಮೂರ್ತಿಯನ್ನು ವಾದ್ಯ ಮೇಳಗಳ ಜತೆ ಗುರುವಾರ ಬೆಳಗ್ಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಾಲಯದ ಆವರಣಕ್ಕೆ ತರಲಾಯಿತು.
ಸಂಜೆ 7ಗಂಟೆಗೆ ದೊಡ್ಡ ಎಡೆ ಸೇವೆ, ಭಕ್ತರ ಉರುಳು ಸೇವೆ, ಯುವಕರಿಗೆ ದೇವರ ಮುದ್ರಾ ಸೇವೆ ಸೇರಿ ಹಲವು ಧಾರ್ವಿುಕ ಕಾರ್ಯಕ್ರಮ ನಡೆದವು. ಫೆ.14ರ ಶುಕ್ರವಾರ ಮುಂಜಾನೆ ದೇವರ ಉತ್ಸವ ಮೂರ್ತಿಯ ಹೂವಿನ ಪಲ್ಲಕ್ಕಿಯ ಮೆರವಣಿಗೆಗೆ ನಲ್ಕುಂದ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ಪಾಲ್ಗೊಳ್ಳುತ್ತಾರೆ.