ಬಿಎಸ್‌ವೈಗೆ ಬೀಳ್ಕೊಡುಗೆ ಭಾಷಣ ಮಾಡಿದ ಕಟೀಲ್?; ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯಾಧ್ಯಕ್ಷರಿಂದ ಯಡಿಯೂರಪ್ಪ ಗುಣಗಾನ

Nalin
Published on

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಶನಿವಾರ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮನಸೋ ಇಚ್ಛೆ ಹೊಗಳುವ ಮೂಲಕ ಅವರನ್ನು ಬೀಳ್ಕೊಡುವ ಧಾಟಿಯಲ್ಲಿ ಭಾಷಣ ಮಾಡಿದರು.

ನಾಯಕತ್ವ ಬದಲಾವಣೆಗೆ ದಿನಗಣನೆ ಎಂಬ ಚರ್ಚೆಗಳ ನಡುವೆ ಬಿಜೆಪಿ ಅಧ್ಯಕ್ಷರ ಈ ನಡೆ ತೀವ್ರ ಕುತೂಹಲಕ್ಕೆ ಕಾರಣವಾಯಿತು.
ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ಸಭೆಯಲ್ಲಿ 38 ನಿಮಿಷದ ತಮ್ಮ ಭಾಷಣದ ಬಹುಪಾಲು ಸಮಯವನ್ನು ಬಿಎಸ್‌ವೈ ಅವರನ್ನು ಹೊಗಳಲು ಮೀಸಲಿಟ್ಟರು. ಮಧ್ಯೆ, ಮಧ್ಯೆ ಕೇಂದ್ರದ ಸಾಧನೆಗಳನ್ನು ಮೆಲುಕು ಹಾಕಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸಿದರು. ಪಕ್ಷಕ್ಕಾಗಿ ಯಡಿಯೂರಪ್ಪ ನಡೆಸಿದ ಏಕಾಂಗಿ ಹೋರಾಟ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಹಿಂದಿನ ಹಾಗೂ ಈಗಿನ ಎರಡು ವರ್ಷಗಳ ಅವಧಿಯ ಸಾಧನೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಸೈಕಲ್‌ವಿತರಣೆ, ಭಾಗ್ಯಲಕ್ಷ್ಮೀ ಬಾಂಡ್, ಸಂಧ್ಯಾಸುರಕ್ಷಾ, ಗೋಹತ್ಯೆ ನಿಷೇಧ ಕಾಯ್ದೆ, ಗೋ ರಕ್ಷಣೆಗೆ ದೇಶದಲ್ಲೇ ಮೊದಲ ಬಾರಿ ಜಿಲ್ಲಾವಾರು ಗೋಶಾಲೆಗಳ ನಿರ್ಮಾಣ ಯೋಜನೆ ಜಾರಿಗೊಳಿಸಿದ್ದು ನಮ್ಮ ನಾಯಕ ಎಂದರು.

ನೆರೆ ಸಂತ್ರಸ್ತರಿಗೆ 5 ಲಕ್ಷ ರೂ., ಕೋವಿಡ್‌ನಿಂದ ನಿಧನ ಹೊಂದಿದ ಬಿಪಿಎಲ್ ಕುಟುಂಬಕ್ಕೆ 1ಲಕ್ಷ ರೂ.ಪರಿಹಾರ, ರೈತರ, ನೇಕಾರರ ಸಾಲ ಮನ್ನಾ, ಅಸಂಘಟಿತ ಕಾರ್ಮಿಕರಿಗೆ ನೆರವು ನೀಡಿದ್ದಾರೆ. ಹೈದರಾಬಾದ್​-ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದರು ಎಂದು ಶ್ಲಾಘಿಸಿದರು. ಹೋರಾಟದ ಮೂಲಕವೇ ಬೆಳೆದು ಬಂದ, ದಿಟ್ಟ ನಿಲವು ಕೈಗೊಳ್ಳಲು ಹಿಂದೇಟು ಹಾಕದ ಯಡಿಯೂರಪ್ಪ ಜನಮಾನಸದಿಂದ ಎಂದಿಗೂ ಮರೆಯಾಗದ ಶ್ರೇಷ್ಠ ನಾಯಕ ಎಂದು ಬಣ್ಣಿಸಿದರು.

25 ಲೋಕಸಭೆ ಕ್ಷೇತ್ರಗಳ ಗೆಲುವಿನ ಹಿಂದೆ ಯಡಿಯೂರಪ್ಪ ಅವರ ಶ್ರಮ ಇದೆ. ಬಿಎಸ್‌ವೈ ಹಾಗೂ ಮೋದಿ ಸರ್ಕಾರಗಳ ಸಾಧನೆಯಿಂದ ವಿಧಾನ ಪರಿಷತ್ ಚುನಾವಣೆಯಲ್ಲೂ ಸಾಧನೆ ಸಾಧ್ಯವಾಗಿದೆ. ತಾಪಂ,ಜಿಪಂ ಚುನಾವಣೆಗಳಲ್ಲಿಪಕ್ಷ ಗೆಲುವು ಸಾಧಿಸಲಿದೆ ಎಂದು ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು. ಕೋವಿಡ್ ನಿರ್ವಹಣೆಗೆ ಅಮೆರಿಕದಂತಹ ದೇಶಗಳೇ ಅಸಹಾಯಕತೆ ವ್ಯಕ್ತಪಡಿಸಿದಾಗ ದೇಶದಲ್ಲಿ ಪ್ರಧಾನಿ, ರಾಜ್ಯದಲ್ಲಿ ಸಿಎಂ ಕೈಗೊಂಡ ದಿಟ್ಟ ನಿರ್ಧಾರಗಳನ್ನು ಪ್ರಸ್ತಾಪಿಸಿದರು. ಕೇಂದ್ರ ಸಂಪುಟದಲ್ಲಿ ಕರ್ನಾಟಕಕ್ಕೆ ಮಾನ್ಯತೆ ನೀಡಿ ಮೋದಿ ಕಾಳಜಿ ತೋರಿದ್ದಾರೆ ಎಂದರು.

ಪೂರ್ವಾನುಮತಿ ಪಡೆದು ವಿಜಯೇಂದ್ರ ಗೈರು

ಅಪೇಕ್ಷಿತ 38 ಪದಾಧಿಕಾರಿಗಳ ಪೈಕಿ ರಾಜ್ಯಬಿಜೆಪಿ ಉಪಾಧ್ಯಕ್ಷರಲ್ಲಿ ಒಬ್ಬರಾದ ಬಿ.ವೈ.ವಿಜಯೇಂದ್ರ ಸಹಿತ ಐವರು ಪೂರ್ವಾನುಮತಿಯೊಂದಿಗೆ ಗೈರಾಗಿದ್ದಾರೆ ಎಂದು ಪಕ್ಷದ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಅರುಣ್‌ಕುಮಾರ್, ಸಂಸದರಾದ ಜಿ.ಎಂ.ಸಿದ್ದೇಶ್ವರ, ಪ್ರತಾಪ್‌ಸಿಂಹ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್,ವಿಧಾನ ಪರಿಷತ್ ಸದಸ್ಯರಾದ ಚಿದಾನಂದಗೌಡ, ತುಳಸಿಮುನಿರಾಜು ಗೌಡ, ಜಿಲ್ಲಾಧ್ಯಕ್ಷ ಎ.ಮುರಳಿ, ಎಸ್.ಲಿಂಗಮೂರ್ತಿ,ಕೆ.ಎಸ್.ನವೀನ್, ಸುರೇಶ್ ಸಿದ್ದಾಪುರ, ಎಂ.ಬಿ.ಭಾನುಪ್ರಕಾಶ್, ರಾಜೇಂದ್ರ, ಸಿದ್ದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net