ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಸ್ಕಿ, ಬಸವಕಲ್ಯಾಣದಲ್ಲಿ ಕೇಸರಿ ಧ್ವಜ ಹಾರಾಡುವ ಭರವಸೆ

201120 Sindhanuru BJP Vijayiyatre
ಸಿಂಧನೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಭತ್ತ ಧಾರೆ ಎರೆಯುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
Published on

ಸಿಂಧನೂರು: ಮುಂಬರುವ ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕೇಸರಿ ಧ್ವಜದ ಸಂಕಲ್ಪ ಮಾಡಿದ್ದು, ಇದರೊಂದಿಗೆ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲೂ ಬಿಜೆಪಿ ಧ್ವಜ ಹಾರಿಸಲಿದ್ದೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಶಿರಾ ಹಾಗೂ ಆರ್‌ಆರ್ ನಗರ ಉಪಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿದ್ದೇವೆ. ವಿಜಯೀಯಾತ್ರೆಯನ್ನು ನಾವಿಲ್ಲಿ ಕೈಗೊಂಡಿದ್ದೇವೆ. ಎಲ್ಲ ಉಪಚುನಾವಣೆಗಳು ಮುಗಿದ ನಂತರ ನಮ್ಮ ವಿಜಯೀಯಾತ್ರೆ ಗ್ರಾಪಂ ಚುನಾವಣೆಗೆ ವಿಸ್ತರಣೆಗೊಳ್ಳಲಿದೆ. ನಮಗೆ ಶೇ.80 ಗ್ರಾಪಂ ಗೆದ್ದುಕೊಳ್ಳುವ ಬಲ ಇದೆ. ಇದಕ್ಕೆ ಉಪಚುನಾವಣೆ ಭರ್ಜರಿ ಗೆಲವು ಸಾಕ್ಷಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಲ್ಲಿ ಕೇಸರಿ ಧ್ವಜ ಹಾರಿಸುವ ಸಂಕಲ್ಪ ಇಂದು ಮಾಡುತ್ತೇವೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಮಾತನಾಡಿ, ಉಪಚುನಾವಣೆ ಹಾಗೂ ಗ್ರಾಪಂ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ರಣನೀತಿ ತಯಾರಿಸಲಾಗಿದೆ ಎಂದರು. ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿ, ರಾಜ್ಯದಲ್ಲಿಯೆ ವಿಶಿಷ್ಟ ತಾಲೂಕು ಸಿಂಧನೂರು ಆಗಿದೆ. ಇಲ್ಲಿ ಮೆಡಿಕಲ್ ಕಾಲೇಜ್, ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ರಾಜ್ಯಾಧ್ಯಕ್ಷರು ಸಿಎಂ ಜತೆಗೆ ಚರ್ಚಿಸಿ, ವಿಶೇಷ ಕೊಡುಗೆ ನೀಡಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ, ಶಾಸಕರಾದ ಶಿವರಾಜ ಪಾಟೀಲ್, ಕೆ.ಶಿವನಗೌಡ ನಾಯಕ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಅರವಿಂದ ಲಿಂಬಾವಳಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net