ದ.ಕ. ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ, ತಲಪಾಡಿಗೆ ಭೇಟಿ ನೀಡಿ ಸಚಿವ ಕೋಟ, ಸಂಸದ ನಳಿನ್ ಸೂಚನೆ

nalin
Published on

ಉಳ್ಳಾಲ: ದ.ಕ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಐದಕ್ಕೆ ಇಳಿಕೆಯಾಗಿದ್ದು, ಸಂಪೂರ್ಣ ನಿಯಂತ್ರಿಸುವ ಸಲುವಾಗಿ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ. ಇದಕ್ಕೆ ಇತರ ರಾಜ್ಯಗಳ ಜನ ಸಹಕಾರ ನೀಡಬೇಕು. ಯಾರೇ ಆದರೂ ಸುಳ್ಳು ಹೇಳಿ ರಾಜ್ಯಕ್ಕೆ ಬರಲು ಪ್ರಯತ್ನ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ತಲಪಾಡಿ ಗಡಿ ಭಾಗಕ್ಕೆ ಭೇಟಿ ನೀಡಿದ ಅವರು ಅಧಿಕಾರಿಗಳ ಜತೆ ಚರ್ಚಿಸಿದರು.

ಕೇರಳ ಅಥವಾ ಹೊರ ಜಿಲ್ಲೆಗಳ ಜನರು ದ.ಕ ಜಿಲ್ಲೆ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇರಳದಿಂದ ಅತೀ ಅಗತ್ಯ ಚಿಕಿತ್ಸೆಗೆ ಬರುವವರಿಗೆ ಅವಕಾಶ ಕಲ್ಪಿಸಲಾಗಿದ್ದು, ಕೇಂದ್ರದಿಂದ ನಿಯೋಜನೆಗೊಂಡಿರುವ ವೈದ್ಯರ ತಂಡ ಅವರನ್ನು ಪರಿಶೀಲಿಸಿ, ಸೋಂಕು ಇಲ್ಲ ಎಂದು ದೃಢಪಡಿಸಿದ ಬಳಿಕವಷ್ಟೇ ರಾಜ್ಯ ಗಡಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಮೇಲಿನ ತಲಪಾಡಿಯ ಜನರ ಬಳಿ ಗುರುತಿನ ಚೀಟಿ ಇದ್ದು, ಅದನ್ನು ತೋರಿಸಿ ಬರಲು ಅವಕಾಶ ನೀಡಬೇಕಾಗುತ್ತದೆ ಎಂದು ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ತಿಳಿಸಿದರು. ಪ್ರತಿಕ್ರಿಯಿಸಿದ ನಳಿನ್, ಮೇಲಿನ ತಲಪಾಡಿ ಎಂದು ಹೇಳಿ ಕೇರಳ ಭಾಗದಿಂದಲೂ ಜನರು ಗಡಿದಾಟಿ ಬರುವ ಅವಕಾಶ ಇದ್ದು, ಇದಕ್ಕೆ ಅವಕಾಶ ನೀಡದೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಎಸಿಪಿ ಕೋದಂಡರಾಮ ಅವರಿಗೆ ಸೂಚಿಸಿದರು.

ಜಿಪಂ ಸದಸ್ಯೆ ಧನಲಕ್ಷ್ಮಿಗಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net