

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ವ್ಯಾಪ್ತಿಯ ಕೊಟ್ಟಯ್ಯನಕೊಪ್ಪಲು ತಿರುವಿನಲ್ಲಿರುವ ಮುಖ್ಯರಸ್ತೆಯ ಹಾರಂಗಿ ನಾಲೆ ಸೇತುವೆ ತಡೆಗೋಡೆ ಮುರಿದು ಬಿದ್ದಿದ್ದು, ವಾಹನ ಸವಾರರು ನಿತ್ಯ ಜೀವಭಯದಿಂದ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಲಗನಹಳ್ಳಿ ಗ್ರಾಮದಿಂದ ಕಣಗಾಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿಯೇ ಹಾರಂಗಿ ಕಾಲುವೆ ಏರಿ ಇದೆ. ಇಲ್ಲಿನ ಜನರು ಸಮೀಪದ ಕೊಟ್ಟಯ್ಯನಕೊಪ್ಪಲು, ಮನುಗನಹಳ್ಳಿ, ಕಣಗಾಲು ಗ್ರಾಮದ ಮೂಲಕ ಕುಶಾಲನಗರ, ಮಡಿಕೇರಿ, ಹಾಸನ ಜಿಲ್ಲೆಗೆ ಓಡಾಡುವುದಕ್ಕೆ ಈ ರಸ್ತೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ ಜನಸಾಮಾನ್ಯರು ಹಾಗೂ ವಾಹನ ಸವಾರರು ಇಲ್ಲಿ ಸಂಚರಿಸಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಭಾಗದ ರೈತರು ಪ್ರಮುಖ ವಾಣಿಜ್ಯ ಬೆಳೆಗಳಾದ ಶುಂಠಿ ಹಾಗೂ ತಂಬಾಕು ಬೇಸಾಯ ಮಾಡುವ ಮೂಲಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ರೈತರು ತಾವು ಬೆಳೆದ ಹೊಗೆಸೊಪ್ಪು ಮತ್ತು ಶುಂಠಿಯನ್ನು ಜಮೀನುಗಳಿಂದ ಟ್ರ್ಯಾಕ್ಟರ್ ಸೇರಿದಂತೆ ಇತರ ವಾಹನಗಳ ಮೂಲಕ ಇದೇ ಮಾರ್ಗವಾಗಿ ಸಾಗಣೆ ಮಾಡುತ್ತಿದ್ದು, ಹದಗೆಟ್ಟ ರಸ್ತೆಯಿಂದ ವಾಹನದಲ್ಲಿ ಓಡಾಡಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಳ್ಳುವಂತಹ ಸ್ಥಿತಿ ಬಂದಿದೆ.
ಅಪರಿಚಿತ ವಾಹನವು ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಸೇತುವೆಯ ತಡೆಗೋಡೆಗೆ ಗುದ್ದಿದ್ದ ಪರಿಣಾಮ, ಈ ಸಮಸ್ಯೆ ಎದುರಾಗಿದೆ. ವಾಹನ ಸವಾರರು ಸಂಚರಿಸುವ ಅದರಲ್ಲೂ ರಾತ್ರಿ ವೇಳೆ ಸಂಚರಿಸುವ ಸಂದರ್ಭದಲ್ಲಿ ಎಚ್ಚರ ತಪ್ಪಿದ್ದರೆ, ನಾಲೆಗೆ ಬೀಳಬೇಕಾಗುತ್ತದೆ. ಹಾಗಾಗಿ, ಈ ವಿಚಾರವಾಗಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮ ತೆಗೆದುಕೊಳ್ಳುವ ಮೂಲಕ ಸೇತುವೆಯ ಎರಡು ಬದಿಗೆ ಸಮರ್ಪಕವಾದ ತಡೆಗೋಡೆ ನಿರ್ಮಿಸಿ, ವಾಹನ ಸವಾರರಿಗೆ ಸಮಸ್ಯೆ ಆಗದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕೊಟ್ಟಯ್ಯನಕೊಪ್ಪಲು ತಿರುವಿನ ಮುಖ್ಯರಸ್ತೆಯ ಎರಡು ಬದಿಯಲ್ಲಿರುವ ಸೇತುವೆಯ ತಡೆಗೋಡೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಯಾವ ಸಂದರ್ಭದಲ್ಲಿ ಮುರಿದು ಬೀಳುವ ಸ್ಥಿತಿಗೆ ತಲುಪುತ್ತದೆ ಎಂಬುದು ತಿಳಿಯುತ್ತಿಲ್ಲ. ಒಂದು ವೇಳೆ ಮುರಿದು ಬಿದ್ದರೆ ಇಲ್ಲಿ ಸಂಚರಿಸುವಂತಹ ವಾಹನ ಸವಾರರು ನೇರವಾಗಿ ಕಾಲುವೆಗೆ ಬೀಳಬೇಕಾಗುತ್ತದೆ. ಅಲ್ಲದೇ ಸೇತುವೆಯೂ ಇಳಿಜಾರು ಪ್ರದೇಶದಲ್ಲಿ ಇರುವುದರಿಂದ ಮಳೆ ಬಂದಂತಹ ಸಂದರ್ಭದಲ್ಲಿ ನೀರಿಗೆ ಕೊಚ್ಚಿ ಬರುವಂತಹ ಮಣ್ಣು ಸೇತುವೆ ಮೇಲೆಯೇ ದಟ್ಟವಾಗಿ ಸಂಗ್ರಹಣೆ ಆಗುತ್ತಿದೆ. ಇದರಿಂದ ಸಂಚಾರ ಮಾಡುವಂತಹ ವಾಹನ ಸವಾರರು ಮಳೆಗಾಲದಲ್ಲೂ ಓಡಾಡುವುದಕ್ಕೂ ಭಯಭೀತರಾಗಿದ್ದಾರೆ.