

ನಾಲತವಾಡ: ಪಟ್ಟಣದ ಶರಣ ವೀರೇಶ್ವರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 13 ಸ್ಥಾನದ ನಿರ್ದೇಶಕರ ಮಂಡಳಿ ಚುನಾವಣೆ ಮುಂಬರುವ ಡಿ.29 ರಂದು ಜರುಗಬೇಕಿತ್ತು. ಆದರೆ ಸೋಮವಾರ ನಾಮಪತ್ರ ಹಿಂಪಡೆಯುವ ದಿನ ಎಂ.ಎಸ್.ಪಾಟೀಲ ಹಾಗೂ ನ್ಯಾಯವಾದಿ ಬಿ.ಎಂ.ತಾಳಿಕೋಟಿ, ಎ.ಜಿ.ಗಂಗನಗೌಡರ, ಬಸವರಾಜ ಗಂಗನಗೌಡರ, ಮಹಾಂತೇಶ ಗಂಗನಗೌಡರ (ಎಂಎಜಿ) ಇನ್ನಿತರರು ಸೇರಿಕೊಂಡು ಕಣದಲ್ಲಿ ಉಳಿದಿದ್ದ 9 ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವಂತೆ ಮನವೊಲಿಸಿ ನಿರ್ದೇಶಕರ ಅವಿರೋಧ ಆಯ್ಕೆಗೆ ಕಸರತ್ತು ಮಾಡಿದರು.
7 ಸಾಮಾನ್ಯ ಮೀಸಲು ಕ್ಷೇತ್ರದಿಂದ ಮಹಾಂತಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ಗುರುಸಂಗಪ್ಪ ಗಡೇದ, ಬಸವಂತಪ್ಪ ಗಂಗನಗೌಡರ, ಶಂಕ್ರಪ್ಪ ನಾಗರದಿನ್ನಿ, ಬಸವರಾಜ ತಾಳಿಕೋಟಿ, ಶಿವಪುತ್ರಯ್ಯ ಸ್ಥಾವರಮಠ ಅವಿರೋಧ ಆಯ್ಕೆಯಾಗಿದ್ದಾರೆ.
ಪ್ರವರ್ಗ ಅ ಮೀಸಲು ವರ್ಗದಿಂದ ಖಾಜಾಹುಸೇನ ಎತ್ತಿನಮನಿ, ಪ್ರವರ್ಗ ಬಿ ಮೀಸಲು ವರ್ಗದಿಂದ ಸಂಗಣ್ಣ ಹಡಲಗೇರಿ, ಪರಿಶಿಷ್ಟ ಜಾತಿ ವರ್ಗದಿಂದ ಬಸವರಾಜ ತಿರುಮುಖಿ, ಪರಿಶಿಷ್ಟ ಪಂಗಡ ವರ್ಗದಿಂದ ಬಾಲಪ್ಪ ಹಟ್ಟಿ, ಮಹಿಳಾ ಮೀಸಲು ವರ್ಗದಿಂದ ಸುಮಿತ್ರಾ ದೇಶಮುಖ, ಭಾರತಿ ಪಾಟೀಲ (ಮೇಟಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಆರ್.ಎಲ್.ಧಮ್ಮೂರಮಠ ತಿಳಿಸಿದ್ದಾರೆ.
ಪಟ್ಟಣದ ಜನರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರ ಸಹಕಾರದಿಂದ ಬ್ಯಾಂಕ್ ಎತ್ತರಮಟ್ಟಕ್ಕೆ ಬೆಳೆದಿದೆ. ಬ್ಯಾಂಕ್ ಮತ್ತಷ್ಟು ಬೆಳೆಯಲು ಹಲವರು ತಮ್ಮ ನಾಮಪತ್ರ ಹಿಂಪಡೆದು ಆಡಳಿತ ಮಂಡಳಿ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಆಗಲು ಸಹಕರಿಸಿದ್ದಾರೆ. ಆಯ್ಕೆಯಾದ ಎಲ್ಲಾ ನಿರ್ದೇಶಕರು ಪ್ರಾಮಾಣಿಕವಾಗಿ ಬ್ಯಾಂಕಿನ ಏಳಿಗೆಗಾಗಿ ಶ್ರಮಿಸುತ್ತೇವೆ. ಎಂ.ಎಸ್.ಪಾಟೀಲ, ಶರಣ ವೀರೇಶ್ವರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕ, ನಾಲತವಾಡ