ನಾಲತವಾಡ ಗಂಗಾಧರ ನಗರದಲ್ಲಿ ಬಲಿಗಾಗಿ ಬಾಯ್ತೆರೆದ ಗುಂಡಿ

Nalatwada Gangadhar city, a pothole opened up
ನಾಲತವಾಡದ ಗಂಗಾಧರ ನಗರದ ಶಾಲೆ ಹಿಂಬದಿ ರಸ್ತೆಯ ಮಧ್ಯದಲ್ಲಿಯೇ ಗುಂಡಿ ಬಿದ್ದಿರುವುದು.
Published on

ನಾಲತವಾಡ: ಸ್ಥಳೀಯ ಗಂಗಾಧರ ನಗರದ ಕಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಅರ್ಧ ನಿರ್ಮಿಸಲಾದ ಸಿಸಿ ರಸ್ತೆಯ ಮಧ್ಯದಲ್ಲಿ ಬಾಯ್ತೆರೆದ ಗುಂಡಿಯೊಂದು ಬಲಿಗಾಗಿ ಕಾಯ್ದಿದೆ.

ಕಳೆದ 4 ತಿಂಗಳ ಹಿಂದೆ ನಗರೋತ್ಥಾನದ ಅಡಿಯಲ್ಲಿ ಸಿಸಿ ರಸ್ತೆ ನಿರ್ಮಿಸುವ ವೇಳೆ ಸೇತುವೆ ಬಳಿ ಅರ್ಧಕ್ಕೆ ಕಾಮಗಾರಿ ಮುಗಿಸಿ ಕೈತೊಳೆದುಕೊಂಡಿದ್ದಾರೆ. ಸೇತುವೆ ಮೇಲಿನ ಗುಂಡಿ ಮುಚ್ಚಿ ಎಂದು ಅಂಗಲಾಚಿದರೂ ಗುತ್ತಿಗೆದಾರ ನಿರ್ಲಕ್ಷೃ ವಹಿಸಿ ಇನ್ನೊಮ್ಮೆ ಮಾಡುತ್ತೇನೆ ಎಂದು ಹೇಳಿ ಹೋದವನು ಮರಳಿ ಬಂದಿಲ್ಲ ಎಂದು ನಿವಾಸಿಗಳು ಆಕ್ರೋಶವ್ಯಕ್ತಪಡಿಸಿದರು.

ಇದೇ ರಸ್ತೆಯ ಮೂಲಕ ಆಶ್ರಯ ಬಡಾವಣೆಯ ಶಾಲಾ ಮಕ್ಕಳು ಸೇರಿದಂತೆ ಜಮೀನಿಗೆ ರೈತರು ಹೋಗುತ್ತಾರೆ. ರಸ್ತೆಯ ಮಧ್ಯದಲ್ಲಿಯೇ ಗುಂಡಿ ಬಿದ್ದಿರುವುದರಿಂದ ಸ್ವಲ್ಪ ಮೈಮರೆತರೆ ಗುಂಡಿಯೊಳಗೆ ಬೀಳುವುದು ನಿಶ್ಚಿತ ಎನ್ನುವಂತಾಗಿದೆ. ರಾತ್ರಿ ವೇಳೆ ಕೂಲಿ ಕಾರ್ಮಿಕರು, ಮಹಿಳೆಯರು ಇದೇ ರಸ್ತೆಯ ಮೇಲೆ ಸಂಚರಿಸುತ್ತಾರೆ. ಅವರೆಲ್ಲಾ ಭಯದಲ್ಲಿಯೇ ಇಲ್ಲಿ ಹೋಗುವಂತಾಗಿದೆ.

ಬಾಯ್ತೆರೆದ ಗುಂಡಿಯನ್ನು ಶೀಘ್ರವೇ ಸಿಸಿ ರಸ್ತೆ ನಿರ್ಮಿಸಿ ಮುಚ್ಚಿ ಎಂದು ನಿವಾಸಿಗಳು ಹೇಳಿದರೂ ನಾಳೆ ಮಾಡೋಣ ಎಂದು ಸಂಗ್ರಹಿಸಿದ್ದ ಜಲ್ಲೆ ಮಣ್ಣು ಸಿಮೆಂಟ್‌ನ್ನು ರಾತ್ರೋ ರಾತ್ರಿ ಹೇರಿಕೊಂಡು ಗುತ್ತಿಗೆದಾರ ಪರಾರಿಯಾಗಿದ್ದಾನೆ. ಇದರಲ್ಲಿ ಸ್ಥಳೀಯ ಪಪಂ ಜೆಇ ಕೈವಾಡವಿದೆ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.

ಪಪಂ ಜೆಇ ಅವರಿಗೆ ಹೇಳಿ ಹೇಳಿ ಸಾಕಾಯಿತು. ಸುಳ್ಳು ಹೇಳುತ್ತ ಆ ಪುಣ್ಯಾತ್ಮ ಕಾಲ ಕಳೆದಿದ್ದಾನೆ. ಮಳೆಗಾಲದಲ್ಲಿ ನೀರು ಇದೇ ರಸ್ತೆಯಲ್ಲಿ ಹರಿದು ಗುಂಡಿಯೂ ಕಾಣುವುದಿಲ್ಲ. ಅನೇಕ ಸಾರಿ ಅಲ್ಲಿ ಬಿದ್ದ ಉದಾಹರಣೆಗಳು ಇವೆ. ಶಾಲಾ ಮಕ್ಕಳು ಇಲ್ಲಿಯೇ ಸಂಚರಿಸುತ್ತಿದ್ದ ಅಪಾಯ ಸಂಭವಿಸುವ ಮೊದಲು ಪಪಂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.
ಮಲ್ಲಿಕಾರ್ಜುನ ತತಬೀರಿ, ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net