

ನಾಲತವಾಡ: ವಿದ್ಯುತ್ ತಂತಿ ತಗುಲಿದ ಶಾಕ್‌ನಿಂದ ಮೃತಪಟ್ಟಿದ್ದ ಮಂಗನಿಗೆ ನಾಲತವಾಡ ಪಟ್ಟಣದ ಜಗದೇವನಗರ ನಿವಾಸಿಗಳು ಪೂಜಿಸಿ ಭಾನುವಾರ ಸಂಜೆ ಅಂತ್ಯಸಂಸ್ಕಾರ ನಡೆಸಿದರು.
ಜಗದೇವನಗರದ ಹನುಮಾನ ದೇವಸ್ಥಾನದ ಮರವೊಂದರಲ್ಲಿ ಆಟವಾಡುತ್ತಿದ್ದ ಮಂಗಗಳ ಗುಂಪಿನ ದೊಡ್ಡ ಮಂಗವೊಂದು ಆಯ ತಪ್ಪಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದೆ. ಇದನ್ನು ಕಂಡ ಉಳಿದ ಮಂಗಗಳು ಚೀರಾಟ ಮಾಡಿದವು.
ಕೆಳಕ್ಕೆ ಬಿದ್ದ ಮಂಗನನ್ನು ಸ್ಥಳೀಯರು ನೋಡಿದಾಗ ಅದಾಗಲೇ ಮೃತ ಪಟ್ಟಿತ್ತು. ನಂತರ ಸಾರ್ವಜನಿಕರು ಮೃತ ಮಂಗನಿಗೆ ಹೂಮಾಲೆಗಳನ್ನು ಹಾಕಿ ಹಾಡು, ಬ್ಯಾಂಡ್ ಸಮೇತ ಮೆರವಣಿಗೆ ಮಾಡಿ ಜಗದೇವನಗರದ ಹನುಮಾನ ದೇವಾಲಯದ ಪಕ್ಕದಲ್ಲಿ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಆಲಕೊಪ್ಪರ, ಮಹಮ್ಮದ್ ನಾಡದಾಳ, ರಾಚಯ್ಯ ಹಿರೇಮಠ, ಗುರು ತಂಗಡಗಿ, ಬಸವಂತಪ್ಪ ಆರೇರ, ಮುದಕಪ್ಪ ಚಲವಾದಿ, ಬಾಬು ಕಸಾಬ, ಮಲ್ಲು ನೆರಬೆಂಚಿ, ವೀರೇಶ ದಾರಿಮನಿ, ಮಲ್ಲು ತಳವಾರ, ಬಸು ಮುರಾಳ ಇತರರಿದ್ದರು.