

ನಾಲತವಾಡ: ಚಿಮ್ಮಲಗಿ ಏತ ನೀರಾವರಿ ಕಾಲುವೆ ಕಾಮಗಾರಿ ಸ್ಥಗಿತಗೊಂಡಿರುವ ಅರಸನಾಳ ಗ್ರಾಮದ ಬಳಿಗೆ ಕೆಬಿಜೆಎನ್‌ಎಲ್ ಅಧಿಕಾರಿಗಳನ್ನು ಕರೆಸಿಕೊಂಡ ನಾಲತವಾಡ ಹಾಗೂ ಸುತ್ತಲಿನ ರೈತರು ಅವರೊಂದಿಗೆ ವಾಗ್ವಾದ ನಡೆಸಿದ ಘಟನೆ ಗುರುವಾರ ನಡೆದಿದೆ.
ಕೆಬಿಜೆಎನ್‌ಎಲ್ ಎಇಇ ಆರ್.ಎಲ್. ಹಳ್ಳೂರ ಹಾಗೂ ಗುತ್ತಿಗೆದಾರ ಕಿಲಾರಹಟ್ಟಿಯ ಮದರಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಜಮೀನೊಂದರಲ್ಲಿ ಸಭೆ ಸೇರಿ ಚರ್ಚಿಸಿದ ರೈತರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಂತ್ರಸ್ತ ರೈತರಾದ ಪಥ್ವಿರಾಜ ನಾಡಗೌಡ, ಶಂಕರರಾವ್ ದೇಶಮುಖ, ಅಮರ ದೇಶಮುಖ, ಎಂಎಜಿ ಮಹಾಂತೇಶ, ಸಂಗಣ್ಣ ಕುಳಗೇರಿ, ಭೀಮಣ್ಣ ಗುರಿಕಾರ, ದಾವಸಲಾಬ ಸುಲ್ತಾನಪೂರ, ಮುತ್ತಣ್ಣ ಯರಗೋಡಿ ವೀರೇಶ ಗಂಗನಗೌಡ್ರ, ಸಂಗಣ್ಣ ಗಂಗನಗೌಡ್ರ, ರಮೇಶ ಆಲಕೊಪ್ಪರ ಮಾತನಾಡಿ, ಪ್ರತಿ ವರ್ಷ ಜೂನ್‌ನಲ್ಲಿ ನೀರು ಹರಿಸುತ್ತೇವೆ ಎಂದು ಹೇಳುತ್ತೀರಿ. ಕಳೆದ 13 ವರ್ಷವಾದರೂ ಇನ್ನೂ ಯೋಜನೆ ಪೂರ್ಣಗೊಂಡಿಲ್ಲ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದಾರೆ. ರೈತರು ಕೇಳಲು ಹೋದರೆ ಅವರನ್ನೇ ಬೆದರಿಸುತ್ತಾರೆ. ಜೊತೆಗೆ ನಿಮ್ಮ ಇಲಾಖೆಯ ಹಲವು ಇಂಜಿನಿಯರ್‌ಗಳು ಮನಬಂದಂತೆ ಅವಾಚ್ಯ ಶಬ್ದಗಳಿಂದ ರೈತರನ್ನೇ ಬೈಯುತ್ತಾರೆ. ಅಮರೇಶ್ವರ ದೇವಸ್ಥಾನ ಸಮೀಪ ಈವರೆಗೂ ಸೇತುವೆ ನಿರ್ಮಾಣವಾಗಿಲ್ಲ. ರೈತರ ಬಗ್ಗೆ ಆರೋಪಿಸುವ ನೀವು, ನಿಮ್ಮ ಕೆಳಗಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಏನು ಮಾಡುತ್ತಿದ್ದಾರೆ? ಎಂಬುದು ಗೊತ್ತಿದೆಯೇ? ಎಂದು ಪ್ರಶ್ನಿಸಿದರು.
ಗ್ರಾಮಕ್ಕೆ ಹೊಂದಿಕೊಂಡ ಕಾಲುವೆಗೆ ಮನೆಯೊಂದು ಅಡ್ಡವಾಗಿದ್ದು ಅದನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಬೇಕು ಎಂದ ರೈತರು ಸುಸಜ್ಜಿತ ರಸ್ತೆ ನಿರ್ಮಿಸಿ ಅನುವು ಮಾಡಿಕೊಡಬೇಕು. ಮನೆ ತೆರವು ಮಾಡಲು ಈಗಾಗಲೇ ಮನೆಯ ಮಾಲೀಕರಿಗೆ ಪರಿಹಾರ ಮೊತ್ತ ಪಾವತಿಸಿದ್ದೀರಿ ಎಂದು ಹೇಳುತ್ತಿದ್ದೀರಿ. ಇನ್ನೆರೆಡು ದಿನಗಳಲ್ಲಿ ಮನೆ ತೆರವುಗೊಳಿಸಿ, ಕಾಲುವೆ ಪಕ್ಕದಲ್ಲಿ ರೈತರಿಗೆ ರಸ್ತೆ ನಿರ್ಮಿಸಿಕೊಡಬೇಕು ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿದರು.
ಕಅಧಿಕಾರಿ ಎಇಇ ಆರ್.ಎಲ್. ಹಳ್ಳೂರ ರೈತರ ಅಹವಾಲು ಆಲಿಸಿ, ಕಾಲುವೆಗೆ ಮಣ್ಣು ಸುರಿದು ನೀರು ಹರಿಯದಂತೆ ಮಾಡಿದ್ದನ್ನು ತೆರವುಗೊಳಿಸಿ, ಇನ್ನೆರೆಡು ದಿನಗಳಲ್ಲಿ ನಾಲತವಾಡ ಭಾಗದ ಕಾಲುವೆಗಳಿಗೆ ನೀರು ಹರಿಯುವಂತೆ ಮಾಡುವುದಾಗಿ ತಿಳಿಸಿದರು. ಅರಸನಾಳದ ರೈತ ಹಾಗೂ ಮನೆ ತೆರವು ಮಾಡಲು ಸ್ಪಂದಿಸಿದವರನ್ನು ರೈತರು ಅಭಿನಂದಿಸಿದರು.
ನೀರು ಹರಿಯದಿರಲು ಕಾರಣ
ಚಿಮ್ಮಲಗಿ ಏತ ನೀರಾವರಿ 13ನೇ ‘ಎ’ ಅರಸನಾಳ ಬಳಿ ವಿತರಣಾ ಕಾಲುವೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಅರಸನಾಳ ರೈತರೊಬ್ಬರು ತಮ್ಮ ಜಮೀನುಗಳಿಗೆ ತೆರಳಲು ರಸ್ತೆ ಹಾಗೂ ಸೇತುವೆ ನಿರ್ಮಿಸಬೇಕು. ಆಗ ಮಾತ್ರ ನೀರು ಹರಿಸಲು ಹಾಗೂ ಕಾಲುವೆ ದುರಸ್ತಿ ಮಾಡಲು ಅನುವು ಮಾಡಿಕೊಡುತ್ತೇನೆ ಎಂದು ಹೇಳಿ ಕಾಲುವೆಗೆ ಮಣ್ಣು ಹಾಕಿ ನೀರು ಹರಿಯದಂತೆ ತಡೆಯೊಡ್ಡಿದ್ದರು. ಇದರ ಪರಿಣಾಮ ಅರಸನಾಳ, ನಾಲತವಾಡ ಭಾಗದ ನೂರಾರು ರೈತರ ಜಮೀನುಗಳಿಗೆ ನೀರು ಸ್ಥಗಿತಗೊಂಡಿತ್ತು.