

ಧಾರವಾಡ: ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ನಾಕು ತಂತಿ ಅತ್ಯಂತ ಕಠಿಣ ಕಾವ್ಯವಾಗಿದೆ. ಆದರೆ, ಇದು ಅರ್ಥವಾಗದ ಕಾವ್ಯವಲ್ಲ. ಇಂತಹ ಕಠಿಣ ಕಾವ್ಯ ಅರ್ಥ ಮಾಡಿಕೊಳ್ಳಲು ಓದುಗರು ತಕ್ಕ ಸಿದ್ಧತೆ ಮಾಡಿಕೊಂಡಿರಬೇಕು ಎಂದು ಹಿರಿಯ ಸಾಹಿತಿ ಆನಂದ ಝುಂಜರವಾಡ ಹೇಳಿದರು.
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಬೇಂದ್ರೆಯವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಂದ ಸುವರ್ಣ ಸಂಭ್ರಮದ ನಿಮಿತ್ತ ಸಾಧನಕೇರಿಯ ಬೇಂದ್ರ ಭವನದಲ್ಲಿ ಭಾನುವಾರ ಹಮ್ಮಿಕೊಂಡ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ‘ನಾಕುತಂತಿ: ಕಲೆ ಮತ್ತು ತತ್ವಗಳ ಸಖೀಗೀತ’ ಎಂಬ ವಿಷಯ ಕುರಿತು ಮಾತನಾಡಿದರು. ಕಲೆ ಮತ್ತು ತತ್ವದ ಸೂಕ್ಷ್ಮವನ್ನು ಬೇಂದ್ರೆ ತಿಳಿದಿದ್ದರು. ಕಲೆ ಮತ್ತು ತತ್ವ ಎರಡೂ ಅವರ ಸ್ವಂತದ ಬದುಕಿನಿಂದ ರೂಪಗೊಂಡಿದ್ದವು. ಅವರ ಕಾವ್ಯ ಅವರ ಬದುಕಿನ ಕಷ್ಟ್ಟದಿಂದ, ಅವರು ಅನುಭವಿಸಿದ ದುಃಖದಿಂದ ಹೊರ ಹೊಮ್ಮಿದೆ ಎಂದರು.
ಸಾಹಿತಿ ಬಸವರಾಜ ಡೋಣೂರ ಮಾತನಾಡಿ, ಬೇಂದ್ರೆಯವರಂಥ ಕವಿ ಸಿಕ್ಕಿದ್ದು ಕನ್ನಡಿಗರ ಸೌಭಾಗ್ಯ. ಬೇಂದ್ರೆಯವರ ಕಾವ್ಯ ಒಂದು ಅನುಭವವಾಗಿ, ಅನುಭೂತಿಯಾಗಿ ಮತ್ತು ಸಂವೇದನೆಯಾಗಿ ದಕ್ಕಬೇಕು ಎಂದರು.
ದ.ರಾ.ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಿ.ಎಂ.ಹಿರೇಮಠ ಮಾತನಾಡಿ, ಬೇಂದ್ರೆಯವರು ತಮ್ಮ ಪಾಡನ್ನು ತಮ್ಮ ಕಾವ್ಯದಲ್ಲಿ ತೋಡಿಕೊಂಡಿದ್ದಾರೆ ಎಂದರು. ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ನೀಲಕ್ಕ ಪಾಟೀಲ ಇದ್ದರು.
ಡಾ.ವಿಜಯಲಕ್ಷ್ಮೀ ದಾನರೆಡ್ಡಿ ನಿರೂಪಿಸಿದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಟ್ರಸ್ಟ್‌ನ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ.ಕೃಷ್ಣ ಕಟ್ಟಿ, ಡಾ.ಆನಂದ ಪಾಟೀಲ, ನರಸಿಂಹ ಪರಂಜಾಪೆ, ಸುಶೀಲೇಂದ್ರ ಕುಂದರಗಿ, ಪಿ.ಎ.ಪೋಲಿಸ್ ಪಾಟೀಲ, ಶ್ರೀನಿವಾಸ ಹುದ್ದಾರ ಇತರರಿದ್ದರು.