ನಕ್ಕನಹಳ್ಳಿಗೆ ಬೇಕಿದೆ ಅಭಿವೃದ್ಧಿಯ ಕಾಯಕಲ್ಪ

Nakkanahalli
Published on
ಪರಿಶಿಷ್ಟ ಜಾತಿ, ಪಂಗಡದವರೇ ಇರುವ ಗ್ರಾಮಕ್ಕಿಲ್ಲ ನೀರು, ಚರಂಡಿ, ರಸ್ತೆ | ಸ್ಮಶಾನಕ್ಕೆ ಹಿಡಿದ ಗ್ರಹಣ

ಬೂದಿಕೋಟೆ: ಸರ್ಕಾರ ಗ್ರಾಮಗಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರೂ, ಹಲವು ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತಗೊಂಡು ಇಂದಿಗೂ ಗ್ರಾಮಗಳು ಅಭಿವೃದ್ಧಿ ಹೊಂದಿಲ್ಲ. ಇದಕ್ಕೆ ಸಾ ಎಂಬಂತಿದೆ ಮೂಲ ಸೌಕರ್ಯಗಳಿಂದ ದೂರ ಉಳಿದ ನಕ್ಕನಹಳ್ಳಿ.
ಬಂಗಾರಪೇಟೆ ತಾಲೂಕಿನ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕ್ಕನಹಳ್ಳಿಯಲ್ಲಿ ಸುಮಾರು 20 ಕುಟುಂಬ ವಾಸವಿದ್ದು, ಎಲ್ಲ ಕುಟುಂಬಗಳು ಪ.ಜಾತಿ, ಪಂಗಡದವರೇ ಆಗಿದ್ದಾರೆ. ಗ್ರಾಮವು ಬಲಮಂದೆ ಕ್ಷೇತ್ರ ಒಳಪಟ್ಟಿದ್ದು, ಬೋಯಿಲೂರು, ಬತ್ತೇಗೌಡನೂರು, ಕೋಡಿಹಳ್ಳಿ, ನಕ್ಕನಹಳ್ಳಿಗಳಿಂದ ಮತ ಪಡೆದು ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ಇಬ್ಬರು ಗ್ರಾಪಂ ಸದಸ್ಯರಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ.
ಪಂಚಾಯಿತಿ ಕೇಂದ್ರ ಸ್ಥಾನದಿಂದ ಸುಮಾರು 2ಕಿ.ಮೀ. ದೂರದಲ್ಲಿರುವ ನಕ್ಕನಹಳ್ಳಿಗೆ ಸರಿಯಾದ ರಸ್ತೆ ವ್ಯವಸ್ಥೆಯಿಲ್ಲ. ರಸ್ತೆ ತುಂಬಾ ಜಲ್ಲಿಕಲ್ಲುಗಳೇ ತುಂಬಿವೆ. ಜನ ಹಾಗೂ ವಾಹನ ಸಂಚಾರಕ್ಕೆ ಜೀವ ಹಾನಿಯ ಆತಂಕ ಎದುರಾಗಿದೆ. ಸರ್ಕಾರ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂ.ಖರ್ಚು ಮಾಡುತ್ತಿದ್ದರೂ, ರಸ್ತೆಗಳ ದುಸ್ಥಿತಿ ಮಾತ್ರ ಬದಲಾಗಿಲ್ಲ.
ಎಲ್ಲಾ ಗ್ರಾಮಗಳು ಅಭಿವೃದ್ಧಿ ಕಾಣುತ್ತಿದ್ದು, ಹೆಂಚಿನ ಮನೆಗಳು ಹೋಗಿ ದೊಡ್ಡ ದೊಡ್ಡ ಮನೆಗಳು ನಿರ್ಮಾಣವಾಗುತ್ತಿವೆೆ. ಸರ್ಕಾರ ಸಹ ವಸತಿ ರಹಿತರಿಗಾಗಿ ಮನೆಗಳನ್ನು ಹಂಚಿಕೆ ಮಾಡುತ್ತಿದೆ. ಆದರೆ ಗ್ರಾಮದಲ್ಲಿ ಹಲವು ಮಂದಿ ಶಿಥಿಲಗೊಂಡ ಹೆಂಚಿನ ಮನೆಗಳಲ್ಲಿಯೇ ವಾಸ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ವಿವಿಧ ವಸತಿ ಯೋಜನೆಗಳ ಮೂಲಕ ಗ್ರಾಮದ ಜನತೆಗೆ ಮನೆಗಳನ್ನು ಹಂಚಿಕೆ ಮಾಡದ ಕಾರಣ ಹಳೆ ಮನೆಗಳಲ್ಲಿಯೇ ವಾಸ ಮಾಡುವಂತಾಗಿದೆ. ಕೆಲವರು ಸಾಲ ಸೋಲ ಮಾಡಿ ಮನೆ ನಿರ್ಮಿಸಲು ಮುಂದಾಗಿದ್ದಾರೆ. ಆದರೆ ಮನೆ ಪೂರ್ಣಗೊಳಿಸಲು ಹಣವಿಲ್ಲದೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆಯೇ ಇದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಬಗೆಹರಿಸಲು ಮುಂದಾಗಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಿದೆ.

ನೈರ್ಮಲ್ಯವಿಲ್ಲ: ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆ, ಹಸು ಮತ್ತು ಕುರಿ ಕೊಟ್ಟಿಗೆಗಳಿಂದ ಬರುವ ತ್ಯಾಜ್ಯ ರಸ್ತೆಗೆ ಹರಿಯುತ್ತಿದೆ. ದನಕರುಗಳಿಗೆ ನೀರು ಒದಗಿಸಲು ಕಟ್ಟಿಸಿರುವ ನೀರಿನ ತೊಟ್ಟಿಗಳ ಬಳಿಯೇ ಬಟ್ಟೆ ಒಗೆಯುವುದು ಮತ್ತು ಪಾತ್ರೆಗಳನ್ನು ತೊಳೆಯುವುದನ್ನು ರೂಢಿಸಿಕೊಂಡಿದ್ದು, ಎಲ್ಲೆಂದರಲ್ಲಿ ತಿಪ್ಪೆಗುಂಡಿಗಳಿರುವ ಕಾರಣ ಗ್ರಾಮದಲ್ಲಿ ನೈರ್ಮಲ್ಯವಿಲ್ಲದೆ ಗಬ್ಬು ನಾರುತ್ತಿದೆ.

ಕುಡಿಯುವ ನೀರಿನ ಸಮಸ್ಯೆ: ಗ್ರಾಮದ ಜನತೆಗೆ ನೀರು ಪೂರೈಸಲು ಇದ್ದ ಬೋರ್​ವೆಲ್​ ಹಲವು ವರ್ಷಗಳ ಹಿಂದೆಯೇ ಕೆಟ್ಟು ಹೋಗಿದೆ. ಅದನ್ನು ಸರಿಪಡಿಸದ ಕಾರಣ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಪಂ ಅಧಿಕಾರಿಗಳು ಬಲಮಂದೆ ಗ್ರಾಮದಿಂದ ಪೈಪ್​ಲೈನ್​ ಹಾಕಿಸಿ ನೀರನ್ನು ಪೂರೈಸುತ್ತಿದ್ದಾರೆ. ಆದರೆ ನೀರು ಸಿಸ್ಟನ್​ ತಲುಪುತ್ತಿಲ್ಲ, ಬದಲಾಗಿ ದನ ಕರುಗಳಿಗೆ ನೀರುಣಿಸಲು ನಿರ್ಮಿಸಿರುವ ತೊಟ್ಟಿಗೆ ನೀರು ಬರುತ್ತಿದ್ದು, ಗ್ರಾಮಸ್ಥರೆಲ್ಲಾ ಅಲ್ಲಿಂದಲೇ ನೀರನ್ನು ಸಂಗ್ರಹಿಸಬೇಕು. ಹೀಗೆ ಪೂರೈಸುವ ನೀರಿಗೆ ಯಾವುದೇ ಸಮಯ ನಿಗದಿಯಾಗಿಲ್ಲ. ಇಷ್ಟ ಬಂದಾಗ ನೀರನ್ನು ಬಿಡುತ್ತಾರೆ. ಚಾತಕ ಪಯಂತೆ ಕಾದು ಕುಳಿತು ನೀರನ್ನು ಹಿಡಿಯಬೇಕು. ಅಕಸ್ಮಾತ್​ ಕೂಲಿ ಅಥವಾ ತೋಟದ ಕೆಲಸಕ್ಕೆ ಹೋದರೆ ನೀರಿಲ್ಲದೆ ಪರದಾಡಬೇಕು. ಇಷ್ಟಾಗಿಯೂ ಪೂರೈಸುತ್ತಿರುವ ನೀರು ಗ್ರಾಮದ ಜನತೆಗೆ ಹಾಗೂ ದನ ಕರುಗಳಿಗೆ ಸಾಲಲ್ಲ ಎಂಬುದು ಗ್ರಾಮಸ್ಥರ ಆರೋಪ.

2 ಕಿ.ಮೀ.ದೂರದ ಅಂಗನವಾಡಿ: ಗ್ರಾಮದಲ್ಲಿ ಅಂಗನವಾಡಿ ಕೇಂದ್ರವಿಲ್ಲದ ಕಾರಣ ಗ್ರಾಮದ ಮಕ್ಕಳು ನಿತ್ಯ2 ಕಿ.ಮೀ ದೂರದ ಬಲಮಂದೆ ಗ್ರಾಮಕ್ಕೆ ನಡೆದೇ ಹೋಗಬೇಕು. ಗರ್ಭಿಣಿ ಮತ್ತು ಬಾಣಂತಿಯರಿಗೂ ಸಮಸ್ಯೆ ತಪ್ಪಿದ್ದಲ್ಲ. ಮಕ್ಕಳು ಅಷ್ಟು ದೂರ ನಡೆದು ಹೋಗಲು ಹಿಂದೇಟು ಹಾಕುತ್ತಿದ್ದು, ಗ್ರಾಮಸ್ಥರ ಅನುಕೂಲಕ್ಕಾಗಿ ಮಿನಿ ಅಂಗನವಾಡಿ ಕೇಂದ್ರವನ್ನಾದರೂ ಆರಂಭಿಸಿದರೆ ಅನುಕೂಲ ಆಗುತ್ತದೆ ಎಂಬುದು ಹಿರಿಯರ ಒತ್ತಾಯವಾಗಿದೆ.

ನಕ್ಕನಹಳ್ಳಿ ಮಜರಾ ಗ್ರಾಮವಾಗಿದ್ದು, ಪಂಚಾಯಿತಿಯಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದೇವೆ. ಗ್ರಾಮದಲ್ಲಿ ಸಿಸಿ ರಸ್ತೆಗಳನ್ನು ಮಾಡಲಾಗಿದ್ದು, ಗ್ರಾಮದ ಬೋರ್​ವೆಲ್​ನಲ್ಲಿ ನೀರಿಲ್ಲದೆ ಬತ್ತಿಹೋಗಿರುವ ಕಾರಣ ಬಲಮಂದೆ ಗ್ರಾಮದಿಂದ ನೀರನ್ನು ಪೂರೈಸಲಾಗುತ್ತದೆ. | ಮಧುಚಂದ್ರ ಪಿಡಿಒ, ಬಲಮಂದೆ


ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಮಾಡದ ಕಾರಣ ಕಲ್ಲುಗಳಿಂದ ಕೂಡಿದ ರಸ್ತೆಯಲ್ಲಿಯೇ ಜನ ಸಂಚರಿಸಬೇಕು. ಇದೇ ರಸ್ತೆ ಮೂಲಕ ಬಲಮಂದೆ ಗ್ರಾಮದ ಶಾಲೆಗೆ ಮಕ್ಕಳು ನಡೆದೇ ಹೋಗಬೇಕು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಟಕವಿಲ್ಲದೆ ಗ್ರಾಪಂ ಪೂರೈಸುವ ನೀರನ್ನೇ ಕುಡಿಯಬೇಕಿದೆ. ಅಧಿಕಾರಿಗಳು ಆದಷ್ಟು ಬೇಗ ರಸ್ತೆಗೆ ಡಾಂಬರು ಹಾಕಿಸಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಟಕ ಅಳವಡಿಸಿದರೆ ಗ್ರಾಮದ ಜನರಿಗೆ ಅನುಕೂಲವಾಗುತ್ತದೆ. ಸುರೇಶ್​ಬಾಬು, ಗ್ರಾಮಸ್ಥ

ಗ್ರಾಮದಲ್ಲಿ ಯಾರಾದರೂ ಸತ್ತರೆ ಅಂತ್ಯ ಸಂಸ್ಕಾರ ಮಾಡಲು, ಸ್ಮಶಾನಕ್ಕೆ ಹೆಣವನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಸ್ಮಶಾನದಿಂದ ಗ್ರಾಮಕ್ಕೆ ರಸ್ತೆ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ನಂತರದ ದಿನಗಳಲ್ಲಿ ಅದರ ಸುದ್ದಿಗೆ ಯಾರೂ ಹೋಗಿಲ್ಲ. ಕೆಲವು ಮನೆಗಳಿಗೆ ಹೋಗಲು ರಸ್ತೆಯೂ ಇಲ್ಲ. ಮುಖ್ಯ ರಸ್ತೆಯಿಂದ ಸ್ಮಶಾನಕ್ಕೆ ರಸ್ತೆ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಸರ್ಕಾರ ಅಥವಾ ಜಿಲ್ಲಾಡಳಿತ ವಿಶೇಷ ಕಾಳಜಿಯನ್ನು ವಹಿಸಿ ಗ್ರಾಮವನ್ನು ಅಭಿವೃದ್ಧಿಪಡಿಸಿ ಮೂಲ ಸೌಲಭ್ಯ ಒದಗಿಸಬೇಕು. ಚಿಕ್ಕವೆಂಕಟೇಶಪ್ಪ ಗ್ರಾಮಸ್ಥ


ಗ್ರಾಮದಲ್ಲಿ ನೀರಿನದ್ದೇ ದೊಡ್ಡ ಸಮಸ್ಯೆಯಾಗಿದೆ. ಇಷ್ಟ ಬಂದಂತೆ ನೀರನ್ನು ಬಿಡುವ ಕಾರಣ ಕೆಲಸ ಕಾರ್ಯ ಬಿಟ್ಟು ನೀರಿಗಾಗಿ ಕಾಯಬೇಕು. ಹಲವು ವರ್ಷಗಳಿಂದ ಸರ್ಕಾರದಿಂದ ಮನೆ ಹಾಕಿಸಿಕೊಡಲು ಮನವಿ ಮಾಡುತ್ತಿದ್ದರೂ ಇದೂವರೆಗೂ ಮನೆ ಮಂಜೂರು ಮಾಡಿಸಿಲ್ಲ. ಗ್ರಾಮದಲ್ಲಿ ಇನ್ನೂ ಐದಾರು ಮಂದಿಗೆ ಮನೆಗಳು ಇಲ್ಲದ ಕಾರಣ ಮನೆಗಳನ್ನು ಹಂಚಿಕೆ ಮಾಡಿದರೆ ಸೂಕ್ತ. ವೆಂಕಟಮ್ಮ ಗ್ರಾಮಸ್ಥೆ

ಆಗಬೇಕಾಗಿರುವುದೇನು?
  • ಸೂಕ್ತ ಚರಂಡಿ ವ್ಯವಸ್ಥೆ
  • ಡಾಂಬರ್​ ರಸ್ತೆ ನಿರ್ಮಾಣ
  • ಶುದ್ಧ ಕುಡಿಯುವ ನೀರಿನ ಟಕ
  • ಅಂಗನವಾಡಿ ಕೇಂದ್ರ
  • ಶೈಕ್ಷಣಿಕ ಅರಿವು
  • ಮಾಸಾಶನಗಳ ಪರಶೀಲನೆ
  • ಸ್ವಚ್ಛತಾ ಕಾಳಜಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net