

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಭಾಗ ಅಭಿವೃದ್ಧಿ ದೃಷ್ಟಿಯಿಂದಲೂ ಹಿಂದುಳಿದಿದ್ದು, ಈಗಲೂ ಇಲ್ಲಿ ಹಳೇ ಸಮಸ್ಯೆಗಳೇ ಕಾಡುತ್ತಿವೆ. ಇಲ್ಲಿನ ಜನರು ಮೂಲಸೌಕರ್ಯಕ್ಕಾಗಿ ಪರದಾಡುತ್ತಲೇ ಇದ್ದಾರೆ. ಇಲ್ಲಿನ ಬಹುದೊಡ್ಡ ಸಮಸ್ಯೆ ಎಂದರೆ ಊರಿನ ಎಲ್ಲ ಕೊಳಚೆ ಹೊತ್ತು ತರುವ ನಾಲಾದ ಕೊಳಕು ಇಲ್ಲಿ ಮುಕ್ತವಾಗಿ, ಕೆಲವೊಮ್ಮೆ ರಸ್ತೆ ಮೇಲೆಯೇ ಹರಿಯುತ್ತದೆ.
ಹಳೇಹುಬ್ಬಳ್ಳಿ ಕಲ್ಮೇಶ್ವರ ನಗರ ಹಾಗೂ ನೇಕಾರ ನಗರದಲ್ಲಿ ‘ವಿಜಯವಾಣಿ’ ಸಂಚರಿಸಿದಾಗ ಕೆಲವೊಂದು ಸಮಸ್ಯೆಗಳು ಅತ್ಯಂತ ಗಂಭೀರವಾಗಿ ಕಂಡು ಬಂದವು. ಅವುಗಳ ಬಗ್ಗೆ ಆಡಳಿತ ವ್ಯವಸ್ಥೆ ಅತಿ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳದಿದ್ದರೆ ರೋಗ ರುಜಿನಗಳು ಕಾಡುವ ಅಪಾಯವಿದೆ. ಕಲ್ಮೇಶ್ವರ ನಗರದಲ್ಲಿ ಕಳೆದ 10-20 ವರ್ಷಗಳಿಂದ ಉತ್ತಮ ರಸ್ತೆಗಳಿಲ್ಲ. ತಗ್ಗು ಬಿದ್ದ ರಸ್ತೆಯಲ್ಲೇ ಹಲವು ಮಳೆಗಾಲಗಳನ್ನು ಕಳೆದಿದ್ದಾರೆ. ವೃದ್ಧರು, ಮಕ್ಕಳು ನಡೆದಾಡುವುದೇ ಒಂದು ಸಾಹಸ!
ಇನ್ನು 30 ವರ್ಷದ ಹಿಂದೆ ಹಾಕಿರುವ ಒಳಚರಂಡಿ ಪೈಪ್ಲೈನ್ ಚಿಕ್ಕದಾಗಿರುವುದರಿಂದ ಇಲ್ಲಿ ಒಳಚರಂಡಿ ಬ್ಲಾಕ್ ಆಗುವುದು ಸಾಮಾನ್ಯವಾಗಿದೆ. ಒಮ್ಮೆ ದೂರು ಕೊಟ್ಟು ಬ್ಲಾಕ್ ಓಪನ್ ಮಾಡಿಸಿದರೆ ಒಂದು ವಾರದಲ್ಲಿ ಮತ್ತೆ ಕಟ್ಟುತ್ತದೆ. ಹಾಗಾಗಿ ಇಲ್ಲಿ ಒಳಚರಂಡಿ ನೀರು ಮನೆಗಳಿಗೆ ನುಗ್ಗುವುದು ಆಗಾಗ ಗಬ್ಬೆದ್ದ ವಾತಾವರಣ ಸೃಷ್ಟಿಯಾಗುವುದು ಸಾಮಾನ್ಯ ಎನ್ನುವಂತಾಗಿದೆ.
‘ಮ್ಯಾನ್ಹೋಲ್ಗಳು ಆಗಾಗ ತುಂಬಿ ತುಳುಕುತ್ತವೆ. ಅವುಗಳಿಗೆ ಗಟಾರ್ ದಾರಿ ತೋರಿಸಲಾಗುತ್ತದೆ. ಎರಡು ವರ್ಷದಿಂದ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲ. ಅಧಿಕಾರಿಗಳದ್ದೇ ಎಲ್ಲ. ದಶಕದಿಂದ ರಸ್ತೆ ದುರಸ್ತಿಗೆ ಒತ್ತಾಯಿಸುತ್ತಿದ್ದೇವೆ. ಒಳಚರಂಡಿ ಪೈಪ್ಲೈನ್ ಬದಲಿಸಿ ಕೊಳಚೆ ಸುಗಮವಾಗಿ ಹರಿಯಲು ವ್ಯವಸ್ಥೆ ಮಾಡಬೇಕು’ ಎನ್ನುತ್ತಾರೆ ಸ್ಥಳೀಯರಾದ ವೀರಣ್ಣ ಬಡಿಗೇರ, ವಿಶಾಲ ಬಾವಿಮನಿ, ಇತರರು.
ಮುಖ್ಯರಸ್ತೆಯಲ್ಲೇ ನಾಲಾ
ಹಳೇಹುಬ್ಬಳ್ಳಿ ನೇಕಾರನಗರ ತಿಮ್ಮಸಾಗರ ರಸ್ತೆಯಲ್ಲೇ ದೊಡ್ಡ ನಾಲಾ ಹರಿಯುತ್ತಿದ್ದು, ಜನರು ರೋಸಿ ಹೋಗಿದ್ದಾರೆ. ತಿಮ್ಮಸಾಗರ ಮಾರ್ಗದಲ್ಲಿ ಶ್ರೀರಾಮ ಕಾಲನಿ, ನೇತಾಜಿ ಕಾಲನಿ, ಛಬ್ಬಿ ಪ್ಲಾಟ್ಗಳು ಇರುವ ಭಾಗದಲ್ಲಿ ಅರ್ಧ ರಸ್ತೆ ನುಂಗಿರುವ ನಾಲಾದಲ್ಲಿ ಯಾವತ್ತೂ ಕೊಳಚೆ ನೀರು ಹರಿಯುತ್ತದೆ. ಅಕ್ಕಪಕ್ಕದ ನಿವಾಸಿಗಳಿಗೆ ಗಬ್ಬು ವಾಸನೆಯ ಉಡುಗೊರೆ. ಮಳೆಗಾಲದಲ್ಲಿ ಇದರ ರೌದ್ರ ನರ್ತನ ಹೇಳತೀರದು ಎನ್ನುತ್ತಾರೆ ಸ್ಥಳೀಯರು.
ಹುಬ್ಬಳ್ಳಿಯ ಬಹುತೇಕ ಬಡಾವಣೆಗಳಿಂದ ಹರಿದು ಬರುವ ಒಳಚರಂಡಿ ಕೊಳಚೆಗೆ ಇಲ್ಲಿ ಮುಕ್ತ ಮಾಡಲಾಗಿದೆ. ಇಲ್ಲಿಯೂ ಪೈಪ್ ಮೂಲಕ ಗಬ್ಬೂರ ಎಸ್ಟಿಪಿಗೆ ಕಳಿಸುವ ವ್ಯವಸ್ಥೆ ಆಗಿಲ್ಲ. ಇಲ್ಲಿ ಸರಿಯಾಗಿ ಬೀದಿದೀಪಗಳಿಲ್ಲ. ಹಾಗಾಗಿ ರಾತ್ರಿ ವೇಳೆ ಜನ ಸಂಚರಿಸಲು ಭಯ ಪಡುವಂತಾಗಿದೆ. ಮುಖ್ಯ ರಸ್ತೆಯಲ್ಲಿಯೇ ನಾಲಾ ಇರುವುದರಿಂದ ವಾಹನ ಸವಾರರಿಗೆ ಅಪಾಯ ಇದ್ದೇ ಇದೆ.
‘ಒಳಚರಂಡಿ ಕೊಳಚೆಯಿಂದಾಗಿ ಈ ಭಾಗದಲ್ಲಿ ಜನಜೀವನವೇ ದುಸ್ತರವಾಗಿದೆ. ಸೊಳ್ಳೆಗಳ ಉತ್ಪತ್ತಿ ತಾಣ, ಹಂದಿ-ನಾಯಿಗಳ ಆವಾಸ ಸ್ಥಾನವಾಗಿದೆ. ಜನ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಮೊದಲು ಇದನ್ನು ಸ್ವಚ್ಛಗೊಳಿಸಬೇಕು’ ಎಂದು ಸ್ಥಳೀಯ ರಾಜು, ಇತರರು ಆಗ್ರಹಿಸಿದರು.
ಸಾವಿರಾರು ರೂ. ಕೊಟ್ಟು ಒಳಚರಂಡಿ ಬ್ಲಾಕ್ ತೆಗೆಸುತ್ತೇವೆ. ಮತ್ತೆ ಒಂದು ವಾರದಲ್ಲಿ ಕಟ್ಟಿ ಬಿಡುತ್ತದೆ. ಗಬ್ಬು ವಾಸನೆ ಸಹಿಸಿಕೊಳ್ಳಲು ಆಗುವುದಿಲ್ಲ. ಹಾಳಾದ ರಸ್ತೆ ಜೀವ ಹಿಂಡುತ್ತದೆ. | ಶಾಂತಾಬಾಯಿ ಹೂಗಾರ, ಕಲ್ಮೇಶ್ವರ ನಗರ ನಿವಾಸಿ
ನೇಕಾರನಗರ- ತಿಮ್ಮಸಾಗರ ರಸ್ತೆ ಅಕ್ಕಪಕ್ಕದ ಜನರಿಗೆ ನೆಮ್ಮದಿಯ ನಿದ್ದೆ ಇಲ್ಲವಾಗಿದೆ. ವಿಷ ಜಂತುಗಳು ಮನೆಯೊಳಗೆ ಬರುತ್ತವೆ. ಇದು ಅನೈರ್ಮಲ್ಯದ ಪರಿಣಾಮ ಚನ್ನಬಸಪ್ಪ, ನೇಕಾರನಗರ ನಿವಾಸಿ
ಪರಿಹಾರಕ್ಕೆ ಕ್ರಮ...
ಹಳೇಹುಬ್ಬಳ್ಳಿ ಕಲ್ಮೇಶ್ವರ ನಗರದಲ್ಲಿ ಯುಜಿಡಿ ಲೈನ್ ದುರಸ್ತಿ ಬಗ್ಗೆ ಶಾಸಕರ ಸೂಚನೆ ಮೇರೆಗೆ ನಮ್ಮ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಒಳಚರಂಡಿ ಕಾಮಗಾರಿ ಮುಗಿದ ನಂತರ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. - ರಿಯಾಜ್ ಅಹ್ಮದ್, ವಲಯ ಕಚೇರಿ 10ರ ಸಹಾಯಕ ಆಯುಕ್ತರು, ಹುಬ್ಬಳ್ಳಿ