ನಕಲಿ ಖಾತೆಯುಳ್ಳ ಎಂಆರ್ ಪುಸ್ತಕ ಪ್ರತ್ಯಕ್ಷ! ; ಲಕ್ಷಾಂತರ ರೂ. ಅವ್ಯವಹಾರಕ್ಕೆ ಸಿಕ್ಕ ದಾಖಲೆ ; ತಪ್ಪೊಪ್ಪಿಕೊಂಡ ಹುಳಿಯಾರು ಬಿಲ್ ಕಲೆಕ್ಟರ್‌ಗಳು

15HULIYAR1
Published on

ಹುಳಿಯಾರು : ೆರ್ಜರಿ ಸಹಿ ಮಾಡಿ ನಕಲಿ ಖಾತೆ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಲಾಗಿದೆ ಎನ್ನಲಾಗಿದ್ದ, ಪಟ್ಟಣ ಪಂಚಾಯಿತಿಯ ಮೊದಲ ಸಾಮಾನ್ಯ ಸಭೆಯಲ್ಲಿ ಕೋಲಾಹಲ ಸೃಷ್ಟಿಸಿ ನಾಪತ್ತೆಯಾಗಿದ್ದ ಎಂಆರ್ ಪುಸ್ತಕ ಮಂಗಳವಾರ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಪತ್ತೆಯಾಯಿತು. ಆದರೆ ನಕಲಿ ಖಾತೆ ಸೃಷ್ಟಿಸಿದವರು ತಾವೇ ಎಂದು ತಪ್ಪೊಪ್ಪಿಕೊಂಡ ಬಿಲ್ ಕಲೆಕ್ಟರ್‌ಗಳು ಇದರ ಹಿಂದಿರುವವರ ಹೆಸರು ಹೇಳದೆ ಗೌಪ್ಯವಾಗಿಟ್ಟರು.

2015 ಮತ್ತು 2016 ಮೇ ಸಾಲಿನ ಎಂಆರ್ ಪುಸ್ತಕದಲ್ಲಿ ಅಂದಿನ ಪಿಡಿಒ ಸಿದ್ದರಾಮಣ್ಣ ಅವರ ಸಹಿಯನ್ನು ೆರ್ಜರಿ ಮಾಡಿ ಖಾತೆಗಳನ್ನು ಮಾಡಿಕೊಡಲಾಗಿದೆ. ಅಲ್ಲದೆ ಈ ನಕಲಿ ಖಾತೆ ಮಾಡಿಕೊಡಲು ಲಕ್ಷಾಂತರ ರೂ. ಪಡೆಯಲಾಗಿದೆ. ಆದರೆ ಈ ಪುಸ್ತಕ ಪಂಚಾಯಿತಿ ಕಚೇರಿಯಲ್ಲಿಲ್ಲದೆ ನಾಪತ್ತೆಯಾಗಿದೆ ಎಂದು ಕಳೆದ ವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ವಿಷಯ ಚರ್ಚೆಯಾಗಿತ್ತು. ಮುಖ್ಯಾಧಿಕಾರಿ ಮಂಜುನಾಥ್ ಹಿಂದಿನ ಪಿಡಿಒ ಅವರಿಂದ ಚಾರ್ಚ್ ತೆಗೆದುಕೊಳ್ಳುವಾಗ ಈ ಪುಸ್ತಕ ತಮಗೆ ಹಸ್ತಾಂತರವಾಗಿಲ್ಲ ಎಂದು ದಾಖಲೆ ತೋರಿಸಿ ಮೌನಕ್ಕೆ ಶರಣಾದರು. ನಂತರ ಸಭೆಗೆ ಅಂದಿನ ಪಿಡಿಒ ಸಿ.ಎಸ್.ಸಿದ್ದರಾಮಣ್ಣ ಅವರನ್ನೇ ಖುದ್ದು ಕರೆಸಿ ಈ ಪ್ರಕರಣದ ವಿವರಣೆ ಪಡೆಯಲು ಅಧ್ಯಕ್ಷರು ಮುಂದಾದರು. ಆಗ ಎಂಆರ್ ನಂಬರ್ 179 ರಿಂದ 344ರವರೆವಿಗೆ ಮಾತ್ರ ನನ್ನ ಅವಧಿಯಲ್ಲಿ ಖಾತೆ ಬದಲಾವಣೆ ಮಾಡಲಾಗಿದ್ದು, ಅಲ್ಲಿಂದ 365 ನಂಬರ್‌ವರೆವಿಗೂ ನನ್ನ ಸಹಿ ೆರ್ಜರಿ ಮಾಡಿ ನಕಲಿ ಖಾತೆ ಮಾಡಿದ್ದಾರೆ ಎಂದು ಖುದ್ದು ಸಿದ್ದರಾಮಣ್ಣ ಸ್ಪಷ್ಟಪಡಿಸಿದ್ದರು. ಅಚ್ಚರಿ ಎನ್ನುವಂತೆ ಹಿಂದಿನ ಪಿಡಿಒ ಬಂದ ತಕ್ಷಣ ಬಿಲ್ ಕಲೆಕ್ಟರ್‌ಗಳಾದ ವೆಂಕಟೇಶ್ ಹಾಗೂ ಕೃಷ್ಣಮೂರ್ತಿ ಅವರು ಸಭೆಯಿಂದ ಕಾಲ್ಕಿತ್ತಿದ್ದರು. ಅಧ್ಯಕ್ಷರು ದೂರವಾಣಿ ಕರೆ ಮಾಡಿದಾಗ ೆನ್ ಸ್ವಿಚ್ ಆಫ್ ಬರುತ್ತಿತ್ತು. ಪರಿಣಾಮ ಪ್ರಕರಣ ಪೊಲೀಸರಿಗೆ ಹಸ್ತಾಂತರಿಸಲು ತೀರ್ಮಾನಿಸಲಾಯಿತಲ್ಲದೆ ಇವರಿಬ್ಬರನ್ನು ಅಮಾನತು ಮಾಡುವಂತೆ ತೀರ್ಮಾನಿಸಿ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು.

ಮನೆಯಿಂದ ಎಂಆರ್ ಪುಸ್ತಕ ತಂದು ಅಧ್ಯಕ್ಷರ ಕೈಗಿಟ್ಟ! : ಮಂಗಳವಾರ ಸಭೆ ಆರಂಭವಾದರೂ ಹಳೆಯ ವಿಚಾರಗಳ ಚರ್ಚೆಗಳಲ್ಲೇ ಮಧ್ಯಾಹ್ನದವರೆಗೂ ಸಮಯ ತಿಂದುಹಾಕಿತು. ಮಧ್ಯಾಹ್ನ ಊಟದ ನಂತರ ಪಂಚಾಯಿತಿ ದಾಖಲೆಗಳು ನಾಪತ್ತೆಯಾದರೆ ಅಭಿವೃದ್ಧಿ ಮಾಡುವುದಾದರೂ ಹೇಗೆ, ತೆರಿಗೆ ಕಟ್ಟುವ ನಿವಾಸಿಗಳಿಗೆ ಕೊಡುವ ಉತ್ತರವಾದರೂ ಏನು ಎಂದು ಪ್ರಶ್ನಿಸಿ ಅಧ್ಯಕ್ಷರು, ಉಪಾಧ್ಯಕ್ಷರಾದಿಯಾಗಿ ಸರ್ವ ಸದಸ್ಯರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಲು ನಿರ್ಧರಿಸಿದರು.

ಪೊಲೀಸ್ ಠಾಣೆಗೆ ಹೋಗುವ ಮುನ್ನ ಮತ್ತೊಮ್ಮೆ ಬಿಲ್‌ಕಲೆಕ್ಟರ್‌ಗಳನ್ನು ಕರೆಸಿ ಕಡೆ ಅವಕಾಶ ಕೊಡುತ್ತೇವೆ, ನಾಪತ್ತೆಯಾಗಿದ್ದ ಎಂಆರ್ ಪುಸ್ತಕ ಕೊಡಿ ಎಂದು ಸೂಚಿಸಿದರು. ಆಗ ಬಿಲ್‌ಕಲೆಕ್ಟರ್ ವೆಂಕಟೇಶ್ ತಮ್ಮ ಮನೆಗೆ ಹೋಗಿ ಮನೆಯಲ್ಲಿದ್ದ ಎಂಆರ್ ಪುಸ್ತಕ ತಂದು ಅಧ್ಯಕ್ಷರ ಕೈಗಿಟ್ಟರು. ಮನೆಗೆ ತೆಗೆದುಕೊಂಡು ಹೋಗಿದ್ದು ತಪ್ಪಾಗಿದೆ, ಇದರಲ್ಲಿ ನಕಲಿ ಖಾತೆ ಬರೆದಿರುವುದು ನಾನೇ, ಆದರೆ ಸಹಿ ಮಾಡಿಲ್ಲ. ನನ್ನನ್ನು ಕ್ಷಮಿಸಿ ಬಿಡಿ ಎಂದು ಕೇಳಿಕೊಂಡರು. ಹಾಗಾದರೆ ಸಹಿ ಮಾಡಿದವರಾರು ಹೇಳಿ ಎಂದು ಸಭೆಯಲ್ಲಿ ಒತ್ತಾಯ ಮಾಡಿದಾಗ ಕೃಷ್ಣಮೂರ್ತಿ ಸಹಿ ಹಾಕಿಸಿ ಬರುವುದಾಗಿ ಪುಸ್ತಕ ತೆಗೆದುಕೊಂಡು ಹೋಗುತ್ತಿದ್ದ, ಅವನಿಗೆ ಗೊತ್ತು ಎಂದರು.

ತಕ್ಷಣ ಕೃಷ್ಣಮೂರ್ತಿ ಅವರನ್ನು ಕರೆಸಿ ಸಹಿ ಮಾಡಿದವರ ಬಗ್ಗೆ ಕೇಳಿದಾಗ ತಪ್ಪಾಗಿದೆೆ ಕ್ಷಮಿಸಿ ಬಿಡಿ ಎಂದು ಕೇಳಿಕೊಂಡಿದ್ದು ಬಿಟ್ಟರೆ ಸಹಿ ಮಾಡಿದವರಾರು ಎಂದು ಹೇಳಲಿಲ್ಲ, ಆಗ ಇದರ ಹಿಂದಿರುವವರ ಹೆಸರನ್ನಾದರೂ ಹೇಳು ಎಂದು ಸಭೆ ಒತ್ತಾಯ ಮಾಡಿದರೂ ಇಬ್ಬರೂ ಇದರ ಹಿಂದಿರುವವರ ಹೆಸರನ್ನು ಹೇಳಲಿಲ್ಲ. ನಿಮ್ಮನ್ನು ಕ್ಷಮಿಸಿ ಬಿಟ್ಟುಬಿಡುತ್ತೇವೆ. ಇದರ ಹಿಂದಿರುವವರ ಹೆಸರನ್ನು ಹೇಳಿ ಎಂದು ಅನೇಕರು ಕಾಡಿಬೇಡಿದರೂ ಇಬ್ಬರೂ ತುಟಿ ಬಿಚ್ಚಲಿಲ್ಲ.

ಗದರಿದ ಅಧ್ಯಕ್ಷ ಕೆಎಂಎಲ್ ಕಿರಣ್ : ಅಧ್ಯಕ್ಷ ಕೆಎಂಎಲ್ ಕಿರಣ್ ಅವರು ಗದರಿ ಬಾಯಿ ಬಿಡಿಸಲು ಪ್ರಯತ್ನಿಸಿದರಾದರೂ ವಿಫಲರಾದರು. ಆದರೆ ಮುಖ್ಯಾಧಿಕಾರಿ ಮಂಜುನಾಥ್ ಮಾತ್ರ ಇದರ ಹಿಂದೆ ಯಾರೂ ಇಲ್ಲ ಎಂದರು. ಅಲ್ಲದೆ ಈ ನಕಲಿ ಖಾತೆಗಳ ಆಧಾರದಲ್ಲಿ ನಮೂನೆ 3 ತೆಗೆದುಕೊಟ್ಟಿಲ್ಲ. ಎಂಆರ್ ಪುಸ್ತಕದಲ್ಲಿ ದಾಖಲು ಮಾಡಿದ್ದು ಬಿಟ್ಟರೆ ಮುಂದುವರಿದಿಲ್ಲ ಎಂದರು.

ಇವರು ಎಷ್ಟು ಕೇಳಿದರೂ ಬಾಯಿ ಬಿಡದಿದ್ದಾಗ. ಪೋರ್ಜರಿ ಸಹಿಯ ಮೂಲಕ ಆಗಿರುವ ಖಾತೆಗಳನ್ನು ತಕ್ಷಣ ರದ್ದು ಮಾಡುವಂತೆಯೂ, ನಮೂನೆ 3 ಕೊಟ್ಟಿದ್ದರೆ ಕೊಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಬರೆಯುವಂತೆಯೂ, ೆರ್ಜರಿ ಸಹಿ ಮಾಡಿ ಅಕ್ರಮ ಖಾತೆ ಮಾಡಿರುವವರನ್ನು ಅಮಾನತು ಮಾಡುವಂತೆಯೂ ಸಭೆಯಲ್ಲಿ ನಿರ್ಧರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net