ಕಡುಬಡತನದಲ್ಲಿ ಬೆಳೆದ ನಾಗವೇಣಿ ರಾಜ್ಯಕ್ಕೆ 5ನೇ ಸ್ಥಾನ

New Ankita Rayachur new
Published on

ಹುಬ್ಬಳ್ಳಿ : ಕಡು ಬಡತನದಲ್ಲೇ ಬೆಳೆದ ವಿದ್ಯಾರ್ಥಿನಿಯೊಬ್ಬಳು ಸರ್ಕಾರಿ ಕಾಲೇಜಿನಲ್ಲಿ ಓದಿ, ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ.

ಇಲ್ಲಿನ ಗೋಪನಕೊಪ್ಪ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ನಾಗವೇಣಿ ರಾಯಚೂರು 593 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ. ಭೂಗೋಳಶಾಸ್ತ್ರ ಹಾಗೂ ರಾಜ್ಯಶಾಸ್ತ್ರದಲ್ಲಿ ತಲಾ 100 ಅಂಕ ಪಡೆದಿರುವ ನಾಗವೇಣಿ, ಇತಿಹಾಸ ಮತ್ತು ಶಿಕ್ಷಣಶಾಸ್ತ್ರದಲ್ಲಿ ತಲಾ 99 ಅಂಕ ಪಡೆದಿದ್ದಾಳೆ. ಕನ್ನಡದಲ್ಲಿ 99 ಹಾಗೂ ಇಂಗ್ಲಿಷ್​ನಲ್ಲಿ 96 ಅಂಕ ಪಡೆದಿದ್ದಾಳೆ.

ಈಕೆಯ ತಂದೆ ಆಂಥೋನಿ ಅಂಗವಿಕಲರಾಗಿದ್ದು, ಕೂಲಿ ಕೆಲಸ ಮಾಡುತ್ತ ಮಗಳಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ತಂದೆ ಹಾಗೂ ತಾಯಿ ಸುಲೋಚನಾರ ಪ್ರೋತ್ಸಾಹವೇ ನನ್ನ ಸಾಧನೆಗೆ ಕಾರಣ ಎನ್ನುತ್ತಾಳೆ ವಿದ್ಯಾರ್ಥಿನಿ ನಾಗವೇಣಿ.

ಮೊದಲಿನಿಂದಲೂ ಶಾಲೆಯಲ್ಲಿ ಉತ್ತಮ ಅಂಕ ಪಡೆಯುತ್ತಿದ್ದ ನಾಗವೇಣಿ, ಸ್ಕಾಲರ್​ಶಿಪ್​ನಿಂದ ಬಂದ ಆರ್ಥಿಕ ನೆರವಿನಿಂದಲೇ ಶುಲ್ಕ ಪಾವತಿಸಿ ಪಿಯು ವಿದ್ಯಾಭ್ಯಾಸ ಮುಗಿಸಿದ್ದಾಳೆ.

ಮಗಳ ಸಾಧನೆ ಕಂಡು ಕಣ್ಣೀರಿಟ್ಟ ಆಕೆಯ ತಂದೆ, ಮಗಳಿಗೆ ಮುಂದಿನ ವಿದ್ಯಾಭ್ಯಾಸ ಕಲಿಸುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಸೇರುವ ಬಯಕೆ ವ್ಯಕ್ತಪಡಿಸಿರುವ ನಾಗವೇಣಿ, ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಇರುವುದಾಗಿ ಹೇಳಿಕೊಂಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net