

ನಾಪೋಕ್ಲು: ಹೋಬಳಿ ವ್ಯಾಪ್ತಿಯ ವಿವಿಧೆಡೆ ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸಮೀಪದ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯ, ಕೂರುಳಿ ಸುಭಾಷ್ ನಗರ ಹಾಗೂ ಬಲ್ಲಮಾವಟಿಯ ಶ್ರೀ ಭಗವತಿ ದೇವಾಲಯಗಳಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಯಿತು.
ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಅರ್ಚಕ ಜಗದೀಶ್ ಭಟ್ ದೇವಾಲಯದ ನಾಗನ ಕಟ್ಟೆಯಲ್ಲಿ ವಿಶೇಷ ಪೂಜಾ ವಿಧಿ ವಿಧಾನ ನೆರವೇರಿಸಿದರು. ದೇವಾಲಯದ ದೇವತಕ್ಕರು, ಭಕ್ತ ಜನ ಸಂಘದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಸೇರಿದಂತೆ ಭಕ್ತಾದಿಗಳು ಶ್ರದ್ಧಾ-ಭಕ್ತಿಯಿಂದ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಬಳಿಕ ದೇವಾಲಯದಲ್ಲಿ ವಿಶೇಷ ಮಹಾಪೂಜೆ ಅನ್ನದಾನ ನೆರವೇರಿತು.
ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಅರ್ಚಕ ದೇವಿ ಪ್ರಸಾದ್ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.ದೇವಾಲಯದಲ್ಲಿ ನಾಗನ ಕಲ್ಲಿಗೆ ಹಾಲು, ಎಳನೀರು ಅಭಿಷೇಕ ಸೇರಿದಂತೆ ಹಣ್ಣು ಕಾಯಿ ಪೂಜೆಯನ್ನು ನೆರವೇರಿಸಿ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಿದರು. ದೇವಾಲಯದ ಪಾರುಪತ್ತೆಗಾರ ಮನು ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು.
ಕೂರುಳಿ ಸುಭಾಷ್‌ನಗರದಲ್ಲಿ ಶ್ರೀ ಭಗವತಿ ದೇವಾಲಯದ ಅರ್ಚಕ ಹರೀಶ್ ಭಟ್ ನಾಗನಕಟ್ಟೆಯಲ್ಲಿ ನಾಗ ಕಲ್ಲಿಗೆ ಪಂಚಾಮೃತ ಅಭಿಷೇಕ ಮಂಗಳಾರತಿ ಮಹಾಪೂಜೆಯನ್ನು ನೆರವೇರಿಸಿದರು. ನಗರದ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಬಲ್ಲಮಾವಟಿ ಗ್ರಾಮದ ಭಗವತಿ ದೇವಾಲಯದ ಸಮೀಪ ನಾಗನಕಟ್ಟೆಯಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು. ಅರ್ಚಕ ಶಶಿಧರ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು.